ADVERTISEMENT

ಸಂಕ್ಷಿಪ್ತ ರಾಷ್ಟೀಯ ಸುದ್ದಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 19:59 IST
Last Updated 9 ಜುಲೈ 2013, 19:59 IST

ಮಗುವನ್ನು ಕರೆ ತಂದ ಶಾರೂಕ್
ಮುಂಬೈ (ಪಿಟಿಐ):
ಮಗು ಅಬ್‌ರಾಂನನ್ನು ಮನೆಗೆ ಕರೆತಂದಿರುವ ಬಾಲಿವುಡ್ ನಟ ಶಾರೂಕ್ ಖಾನ್, ಈ ಮಗುವನ್ನು ಬಾಡಿಗೆ ತಾಯಿಯ ಮೂಲಕ ಪಡೆದಿದ್ದನ್ನು ಒಪ್ಪಿಕೊಂಡಂತಾಗಿದೆ. ಆದರೆ, ಮಗುವಿನ ಭ್ರೂಣ ಲಿಂಗ ಪತ್ತೆ ಪರೀಕ್ಷೆ ನಡೆಸಲಾಗಿತ್ತು ಎಂಬುದನ್ನು ಅವರು ಅಲ್ಲಗಳೆದಿದ್ದಾರೆ.

ತರೂರ್ ಕಚೇರಿ ಮೇಲೆ ದಾಳಿ
ತಿರುವನಂತಪುರ (ಪಿಟಿಐ)
: ಕೇಂದ್ರ ಸಚಿವ ಶಶಿ ತರೂರ್ ಅವರ ಕಚೇರಿ ಮೇಲೆ ಮಂಗಳವಾರ ದಾಳಿ ನಡೆಸಲಾಗಿದ್ದು, ಕಚೇರಿ ಮುಂದೆ ನಿಲ್ಲಿಸಿದ ಬೈಕ್‌ಗೆ ಹಾನಿಯಾಗಿದೆ. ಸಿಪಿಐನ ಯುವ ಘಟಕವಾದ ಅಖಿಲ ಭಾರತ ಯುವ ಒಕ್ಕೂಟ (ಎಐವೈಎಫ್) ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ ಎಂದು ಆಪಾದಿಸಲಾಗಿದೆ. ಈ ಘಟನೆ ನಡೆದಾಗ ತರೂರು ಅವರು ಕಚೇರಿಯಲ್ಲಿ ಇರಲಿಲ್ಲ ಎಂದು ಕಚೇರಿ ಮೂಲಗಳು ಹೇಳಿವೆ.

ಲೈಂಗಿಕ ದೌರ್ಜನ್ಯ: ರಾಘವ್‌ಜೀ ಬಂಧನ
ಭೋಪಾಲ್ (ಪಿಟಿಐ):
ಮನೆ ಕೆಲಸದವನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಮಧ್ಯಪ್ರದೇಶದ ಮಾಜಿ ಹಣಕಾಸು ಸಚಿವ ರಾಘವ್‌ಜೀ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

ಕಟ್ಟಡ ಕುಸಿತ: ಸತ್ತವರ ಸಂಖ್ಯೆ 17ಕ್ಕೆ
ಹೈದರಾಬಾದ್:
ಸಿಕಂದರಾಬಾದ್‌ನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ `ಸಿಟಿ ಸ್ಟಾರ್' ಹೋಟೆಲ್‌ನ ಮೂರು ಮಹಡಿಗಳ ಹಳೆಯ ಕಟ್ಟಡ ಕುಸಿತದ ದುರಂತದಲ್ಲಿ ಸತ್ತವರ ಸಂಖ್ಯೆ 17ಕ್ಕೆ ಏರಿದೆ.

ಕಟ್ಟಡದ ಅವಶೇಷದ ಅಡಿಯಲ್ಲಿ ಸಿಲುಕಿದ್ದ ಹೋಟೆಲ್‌ನ ವ್ಯವಸ್ಥಾಪಕ ಅಲಿ ರಜಾಕ್, ಬಾಣಸಿಗರಾದ ವೆಂಕಟೇಶ್, ಕಿರಣ್ ಅವರ ಶವಗಳು ಮತ್ತು ಗುರುತು ಪತ್ತೆಯಾಗದ ಮತ್ತೊಂದು ಶವವನ್ನು ಹೊರತೆಗೆಯಲಾಗಿದೆ.

ಜಾರ್ಖಂಡ್‌ನಲ್ಲಿ ಜೆಎಂಎಂ ಸರ್ಕಾರ?
ರಾಂಚಿ, ಜಾರ್ಖಂಡ್ (ಐಎಎನ್‌ಎಸ್, ಪಿಟಿಐ):
ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ) ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಹೇಮಂತ್ ಸೊರೆನ್ ಮಂಗಳವಾರ ರಾಜ್ಯಪಾಲ ಸೈಯದ್ ಅಹಮದ್ ಅವರನ್ನು ಭೇಟಿಯಾಗಿ, ರಾಜ್ಯದಲ್ಲಿ ಹೊಸ ಸರ್ಕಾರ ರಚಿಸಲು ತಮ್ಮ ಹಕ್ಕು ಮಂಡಿಸಿದ್ದು, ರಾಜ್ಯದಲ್ಲಿ ಜೆಎಂಎಂ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.