ADVERTISEMENT

ಸಂಪರ್ಕ ಕಳೆದುಕೊಂಡ ಕಾಶ್ಮೀರ ಕಣಿವೆ

ಎರಡನೇ ದಿನವೂ ಮುಂದುವರಿದ ಹಿಮಪಾತ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 19:30 IST
Last Updated 1 ಜನವರಿ 2014, 19:30 IST

ಶ್ರೀನಗರ(ಪಿಟಿಐ): ಹಿಮಪಾತ­ದಿಂದಾಗಿ ರಸ್ತೆ ಸಂಪರ್ಕ ಕಳೆದು­ಕೊಂಡಿದ್ದ ಕಾಶ್ಮೀರ ಕಣಿವೆ, ಈಗ ವಿಮಾನ ಮಾರ್ಗವನ್ನೂ ಬುಧವಾರ ತಡೆ ಹಿಡಿದಿದ್ದರಿಂದ ಬೇರೆ ಪ್ರದೇಶ­ಗಳೊಂದಿಗೆ ಸಂಪರ್ಕ ಕಳೆದುಕೊಂಡಿದೆ.

‘ಮಂಗಳವಾರ ಉಂಟಾದ ಹಿಮ­ಪಾತ­­ದಿಂದಾಗಿ ಅನೇಕ ರಸ್ತೆಗಳು ಹಿಮ­ಚ್ಛಾದಿತವಾಗಿ ಸಂಚಾರ ಯೋಗ್ಯ­ವಾಗಿಲ್ಲ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ­­­ಯನ್ನು ಮುಚ್ಚಲಾಗಿದೆ’ ಎಂದು ಸಂಚಾರ ಪೊಲೀಸ್‌ ವಿಭಾಗದ ವಕ್ತಾರರು ಮಾಹಿತಿ ನೀಡಿದರು.

‘ಕಾಶ್ಮೀರ ಮತ್ತು ಇತರೆ ಪ್ರದೇಶ­ಗಳಿಗೆ ಸಂಪರ್ಕ ಕಲ್ಪಿಸುವ 294 ಕಿ.ಮೀ ಉದ್ದ ರಸ್ತೆಯನ್ನು ಮಂಗಳವಾರದಿಂದ ಮುಚ್ಚ­ಲಾಗಿದೆ. ರಸ್ತೆಗಳು ಸಂಚಾರ ಯೋಗ್ಯ ಹಾಗೂ ಸುರಕ್ಷಿತವಾಗಿವೆ ಎಂದು ಘೋಷಿಸಿದ ನಂತರವೇ ಹೆದ್ದಾರಿ­ಯನ್ನು ಪುನಃ ಆರಂಭಿಸ­ಲಾಗುವುದು. ಹೆದ್ದಾರಿ­ಯಲ್ಲಿ ಪ್ರಯಾಣಿಕರು ಸಿಲುಕಿ­ಕೊಂಡಿರುವ ಕುರಿತು ಯಾವುದೇ ವರದಿಯಾಗಿಲ್ಲ’ ಎಂದೂ ಹೇಳಿದ್ದಾರೆ.

‘ರನ್‌ವೇನಲ್ಲಿ ದಟ್ಟವಾದ ಮಂಜು ಕೂಡಿರುವುದರಿಂದ ಯಾವುದೇ ವಿಮಾ­ನ­­ಗಳು ಶ್ರೀನಗರ ವಿಮಾನನಿಲ್ದಾಣದಲ್ಲಿ ಇಳಿಯಲಿಲ್ಲ  ಮತ್ತು ಪ್ರಯಾಣ ಬೆಳೆಸಿಲ್ಲ’ ಎಂದು ಅಧಿಕಾರಿ ತಿಳಿಸಿದ್ದಾರೆ.

ಹಿಮಪಾತದಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿದ್ಯುತ್‌ ಸರಬ­ರಾಜು ನಿಲ್ಲಿಸಲಾಗಿದೆ.  ಉಪರಸ್ತೆಗಳ ಮೇಲೆ ಬಿದ್ದಿರುವ ಹಿಮವನ್ನು ತೆಗೆಯುವ ಕೆಲಸ ಭರದಿಂದ ಸಾಗಿದೆ. ಶ್ರೀನಗರ ಜಮ್ಮು ರಾಷ್ಟ್ರೀಯ ಹೆದ್ದಾರಿ ಮುಚ್ಚಿರುವುದ­ರಿಂದ ಪ್ರಯಾಣಿಕರು ಮಧ್ಯದಲ್ಲಿಯೇ ಸಿಲುಕಿಕೊಳ್ಳುವಂತಾಗಿದೆ. ಇವರೆಲ್ಲ ಹೆದ್ದಾರಿ ಪುನಃ ಆರಂಭಕ್ಕಾಗಿ ಎದುರು ನೋಡುತ್ತಿದ್ದಾರೆ. ಸುಮಾರು 1300 ವಾಹನಗಳು ಕಾಶ್ಮೀರದ ಪ್ರಮುಖ ನಗರಗಳಲ್ಲಿ ಸಿಲುಕಿಕೊಂಡಿವೆ.

ವೈಷ್ಣೋದೇವಿ ಘಟ್ಟದಲ್ಲಿ ಹಿಮಪಾತ
ಜಮ್ಮು (ಪಿಟಿಐ):
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟದಲ್ಲಿರುವ ವೈಷ್ಣೋದೇವಿ ದೇವ­ಸ್ಥಾನದ ಸುತ್ತ­ಮುತ್ತ­ಲೂ ಅತಿಹೆಚ್ಚು ಹಿಮಪಾತವಾಗಿದೆ. ಇದರ ನಡುವೆ­ಯೂ ಹೊಸ ವರ್ಷದ ಅಂಗವಾಗಿ ಸಹಸ್ರಾರು ಭಕ್ತರು ದೇವಿಯ ದರ್ಶನ ಪಡೆದರು.

‘ಮಾತಾ ವೈಷ್ಣೋದೇವಿ ಘಟ್ಟದ ಪಕ್ಕದಲ್ಲಿರುವ ಭವನ್‌ ಗುಡ್ಡಗಾಡಿನಲ್ಲಿ ಒಂದು ಅಡಿಯಷ್ಟು ಹಿಮ ಬಿದ್ದಿದೆ. ಅಲ್ಲದೇ, ಭೈರವ ಘಟ್ಟದಲ್ಲಿ ಎರಡು ಅಡಿ ಹಿಮ ಬಿದಿದ್ದೆ’ ಎಂದು ಶ್ರೀ ಮಾತಾ ವೈಷ್ಣೋದೇವಿ ಸಮಿತಿಯ ಅಧಿಕಾರಿಗಳು ತಿಳಿಸಿದ್ದಾರೆ. ಚಳಿ ಮತ್ತು ಹಿಮಪಾತದ ನಡುವೆಯೂ ಸುಮಾರು 45 ಸಾವಿರ ಯಾತ್ರಾರ್ಥಿಗಳು ದೇವಿಯ ದರ್ಶನ ಪಡೆದಿದ್ದಾರೆ. ಯಾತ್ರೆಯು ಯಾವುದೇ ಸಮಸ್ಯೆ ಇಲ್ಲದೆ ಸುಗಮವಾಗಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT