ADVERTISEMENT

ಸರ್ಕಾರಕ್ಕೆ ಪ್ರತಿಪಕ್ಷ ತರಾಟೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2013, 19:59 IST
Last Updated 7 ಜುಲೈ 2013, 19:59 IST

ನವದೆಹಲಿ/ಪಟ್ನಾ (ಪಿಟಿಐ): ಬುದ್ಧಗಯಾದ ಮಹಾಬೋಧಿ ದೇವಾಲಯದ ಮೇಲೆ ದಾಳಿ ನಡೆಯುವ ಸಾಧ್ಯತೆ ಇರುವ ಬಗ್ಗೆ ಬೇಹುಗಾರಿಕಾ ಸಂಸ್ಥೆಗಳಿಂದ ನಿರ್ದಿಷ್ಟ ಮಾಹಿತಿ ಇದ್ದರೂ ಬಿಹಾರ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಮುಂಜಾಗ್ರತೆ ವಹಿಸಲು ವಿಫಲವಾಗಿವೆ ಎಂದು ಬಿಹಾರದ ಬಿಜೆಪಿ ಇನ್ನಿತರ ವಿರೋಧ ಪಕ್ಷಗಳು ಟೀಕಿಸಿವೆ.

`ದಿನದಿಂದ ದಿನಕ್ಕೆ ದೇಶದ ಆಂತರಿಕ ಭದ್ರತೆಯು ಸವಾಲಿಗೆ ಪರಿಣಮಿಸಿದೆ. ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಅಗತ್ಯವಾದ ಸಮಗ್ರ ಭದ್ರತಾ ಯೋಜನೆ ರೂಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಟೀಕಿಸಿದ್ದಾರೆ.

`ಬುದ್ಧಗಯಾದಲ್ಲಿ ಉಗ್ರರ ಚಟುವಟಿಕೆ ನಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಇದ್ದಾಗ್ಯೂ ರಾಜ್ಯ ಸರ್ಕಾರ ಹೆಚ್ಚಿನ ಭದ್ರತೆ ಕಲ್ಪಿಸಲಿಲ್ಲ. ಈ ವಿಷಯದಲ್ಲಿ ಕೇಂದ್ರ ಹೊಣೆಗೇಡಿತನದಿಂದ ವರ್ತಿಸಿತು' ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಆಪಾದಿಸಿದ್ದಾರೆ.

`ಬಿಹಾರದ ಮುಖ್ಯಮಂತ್ರಿ ಅವರ ನಿವಾಸವು ಶ್ರೀಸಾಮಾನ್ಯರಿಗಿಂತ ಪಕ್ಷದ ಕಾರ್ಯಕರ್ತರಿಗೆ ಹೆಚ್ಚು ಮುಕ್ತವಾಗಿದೆ. ನಿತೀಶ್ ಕುಮಾರ್ ಅವರು ಜನರ ರಕ್ಷಣೆಗಿಂತ ದೆಹಲಿಯಿಂದ ಬರುವ ಸಚಿವರೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ' ಎಂದು ಬಿಜೆಪಿ ವಕ್ತಾರ ಷಾನವಾಜ್ ಹುಸೇನ್ ಆಕ್ಷೇಪಿಸಿದ್ದಾರೆ.

`ಸರಣಿ ಬಾಂಬ್ ಸ್ಫೋಟ ಘಟನೆ ಖಂಡನೀಯ. ಆದರೆ, ಬೇಹುಗಾರಿಕೆ ವರದಿ ಇದ್ದರೂ ಅದನ್ನು ನಿರ್ಲಕ್ಷಿಸಿದ ರಾಜ್ಯ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ' ಎಂದು ಬಿಹಾರದ ಬಿಜೆಪಿ ಹಿರಿಯ ಮುಖಂಡ, ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಹೇಳಿದ್ದಾರೆ.

`ಬಿಜೆಪಿಯ ಸಖ್ಯ ತೊರೆದ ಜೆಡಿಯು, ಕಾಂಗ್ರೆಸ್‌ನವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಕಸರತ್ತು ನಡೆಸಿದೆಯೇ ಹೊರತು ರಾಜ್ಯದ ಜನರ ರಕ್ಷಣೆಯನ್ನು ನಿರ್ಲಕ್ಷಿಸಿತು' ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಕಿಡಿಕಾರಿದ್ದಾರೆ. `ರಾಜ್ಯ ಸರ್ಕಾರ ಮುಂಜಾಗ್ರತೆ ವಹಿಸಿದ್ದರೆ ಈ ಘಟನೆ ತಪ್ಪಿಸಬಹುದಿತ್ತು. ನಿತೀಶ್ ಕುಮಾರ್ ಅವರ ಸರ್ಕಾರದ ವೈಫಲ್ಯದಿಂದ ಬಿಹಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತಾಗಿದೆ' ಎಂದು ಎಲ್‌ಜೆಪಿ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

ಟೀಕೆಗಳನ್ನು ಅಲ್ಲಗಳೆದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, `ಬೇಹುಗಾರಿಕೆಯ ಮಾಹಿತಿಯನ್ನು ಉಪೇಕ್ಷಿಸಿಲ್ಲ. ಹೆಚ್ಚುವರಿ ಭದ್ರತೆಯನ್ನು ಬುದ್ಧಗಯಾದಲ್ಲಿ ಕಲ್ಪಿಸಲಾಗಿತ್ತು' ಎಂದಿದ್ದಾರೆ.

ಕಾಂಗ್ರೆಸ್ ಖಂಡನೆ: `ಇದು ಹೇಯ ಮತ್ತು ಖಂಡನೀಯ ಕೃತ್ಯ. ರಾಜ್ಯ ಸರ್ಕಾರವು ತಪ್ಪಿತಸ್ಥರನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಬೇಕು' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಯ್ ಮಕಾನ್ ಒತ್ತಾಯಿಸಿದ್ದಾರೆ.

ಕಟ್ಟೆಚ್ಚರ: ರಾಜ್ಯಗಳಿಗೆ ಸೂಚನೆ
ಬುದ್ಧಗಯಾದಲ್ಲಿ ಸಂಭವಿಸಿರುವ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ದೇಶದಲ್ಲಿರುವ ಬೌದ್ಧ ವಿಹಾರಗಳು ಮತ್ತು ಟಿಬೆಟನ್ ನಿರಾಶ್ರಿತರ ಶಿಬಿರಗಳಿರುವ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕಲ್ಪಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚಿಸಿದೆ.

ADVERTISEMENT

ಜೊತೆಗೆ ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ ಮತ್ತಿತರ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸುವಂತೆಯೂ ನಿರ್ದೇಶನ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.