ADVERTISEMENT

ಸರ್ಕಾರ ಹಣಿಯುವ ಪ್ರಯತ್ನಕ್ಕೆ ಬೆಂಬಲ- ಸಿಪಿಎಂ ಭರವಸೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 19:30 IST
Last Updated 14 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ):  ದೇಶದ ಜನತೆಗೆ ಮಿತವ್ಯಯ ಕ್ರಮ ಅನುಸರಿಸುವ ಪಾಠ ಹೇಳುತ್ತಾ, ವಿದೇಶಿ ಬಂಡವಾಳಶಾಹಿಗಳಿಗೆ  ರತ್ನಗಂಬಳಿ ಸ್ವಾಗತ ನೀಡುತ್ತಿರುವ ಯುಪಿಎ ಸರ್ಕಾರವನ್ನು ಸಂಸತ್ತಿನಲ್ಲಿ ಒಂಟಿಯಾಗಿಸುವ ವಿರೋಧ ಪಕ್ಷಗಳ ಪ್ರಯತ್ನಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಸಿಪಿಎಂ ಹೇಳಿದೆ.

ಮುಂದಿನ ಸಂಸತ್ ಅಧಿವೇಶನದಲ್ಲಿ ಸರ್ಕಾರವನ್ನು ಹಣಿಯಲು ಅಗತ್ಯ ಯೋಜನೆ ರೂಪಿಸುವುದಕ್ಕೆ ಸಂಬಂಧಿಸಿದಂತೆ ಇತರ ವಿರೋಧ ಪಕ್ಷಗಳ ಜತೆ ಮಾತುಕತೆ ನಡೆಸಲಾಗುತ್ತದೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ತಿಳಿಸಿದ್ದಾರೆ.

ಪಕ್ಷದ ಕೇಂದ್ರ ಸಮಿತಿಯ ಮೂರು ದಿನಗಳ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರವನ್ನು ಒಂಟಿಯಾಗಿಸಲು ಏನು ಕ್ರಮ ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಇತರ ಪಕ್ಷಗಳ ಜತೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಬೆಂಬಲಿಸುತ್ತೀರಾ ಎಂದು ಕೇಳಿದಾಗ, `ತೃಣಮೂಲ ಕಾಂಗ್ರೆಸ್ ಏನು ಮಾಡುತ್ತದೆ ಎಂಬುದು ನಮಗೆ ಗೊತ್ತಿಲ್ಲ; ಆದರೆ ಸರ್ಕಾರವನ್ನು ಹಣಿಯಲು ನಾವು ಇತರ ಪಕ್ಷಗಳ ಜತೆ ಕೈಜೋಡಿಸುತ್ತೇವೆ~ ಎಂದರು.

ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶ ನೇರ ಬಂಡವಾಳ ಹೂಡಿಕೆಗೆ ಅವಕಾಶ, ಡೀಸೆಲ್ ಬೆಲೆ ಏರಿಕೆ ಮತ್ತು ಸಬ್ಸಿಡಿ ಸಹಿತದ ಎಲ್‌ಪಿಜಿ ಸಿಲಿಂಡರ್ ಬಳಕೆಯ ಮೇಲಿನ ಮಿತಿಯನ್ನು ರದ್ದುಪಡಿಸದಿದ್ದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಹಕ್ಕಿಲ್ಲ ಎಂದು ಕಾರಟ್ ಟೀಕಿಸಿದರು.

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಬಿಜೆಪಿ ಪ್ರಯತ್ನಕ್ಕೆ ಬೆಂಬಲ ನೀಡಲಾಗುತ್ತದೆಯೇ ಎಂದು ಕೇಳಿದಾಗ, ಎಲ್ಲಾ ಸಾಧ್ಯತೆಗಳನ್ನು ನಾವು ಮುಕ್ತವಾಗಿ ಇಟ್ಟಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.