ADVERTISEMENT

ಸಲಿಂಗ ಕಾಮಿಗಳ ಜನಸಂಖ್ಯೆ: ಸಮಗ್ರ ಮಾಹಿತಿಗೆ ಸುಪ್ರೀಂ ಆದೇಶ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 10:15 IST
Last Updated 1 ಮಾರ್ಚ್ 2012, 10:15 IST

ನವದೆಹಲಿ (ಪಿಟಿಐ): ಸಲಿಂಗಕಾಮಿಗಳ ಜನಸಂಖ್ಯೆ ವಿವರಗಳನ್ನು ಸಲ್ಲಿಸದೇ ಇರುವುದಕ್ಕಾಗಿ ಗುರುವಾರ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ಸುಪ್ರೀಂಕೋರ್ಟ್ ಸಲಿಂಗ ಕಾಮಿಗಳ ಜನಸಂಖ್ಯೆಗೆ ಸಂಬಂಧಿಸಿದ ಮಾಹಿತಿ ಹಾಗೂ ಅವರಲ್ಲಿ ಎಚ್ಐವಿ ಬಾಧಿತರಾದವರ ಸಂಖ್ಯೆ ಸೇರಿದಂತೆ ಸಂಪೂರ್ಣ ವಿವರವನ್ನು  ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆಜ್ಞಾಪಿಸಿತು.

ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಮತ್ತು ಎಸ್. ಜೆ. ಮುಖ್ಯೋಪಾಧ್ಯಾಯ ಅವರನ್ನು ಒಳಗೊಂಡ ಪೀಠವು ~ದೆಹಲಿ ಹೈಕೋರ್ಟ್ ಮುಂದೆ ಹಾಜರು ಪಡಿಸಿದ ಮಾಹಿತಿಯನ್ನು ಇಲ್ಲಿ ಹಾಜರು ಪಡಿಸಿಲ್ಲ~ ಎಂದು ಆಕ್ಷೇಪಿಸಿ ಸಮಗ್ರ ಮಾಹಿತಿಯನ್ನು ಮುಂದಿನ ವಿಚಾರಣೆ ದಿನಾಂಕದಂದು ಹಾಜರು ಪಡಿಸುವಂತೆ ನಿರ್ದೇಶಿಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ~ಮನೆಕೆಲಸವನ್ನು~ ಸಮರ್ಪಕವಾಗಿ ಮಾಡಿಲ್ಲ ಎಂದೂ ನ್ಯಾಯಾಲಯ ಸರ್ಕಾರ ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು.

~ನ್ಯಾಯಾಲಯಕ್ಕೆ ಬರುವ ಮುನ್ನ ನೀವು ನಿಮ್ಮ ಮನೆಗೆಲಸವನ್ನು ಸಮರ್ಪಕವಾಗಿ ಮಾಡಿಕೊಂಡು ಬರಬೇಕಾಗಿತ್ತು~ ಎಂದು ನ್ಯಾಯಾಲಯದಲ್ಲಿ ಹಾಜರಾದ ಅಧಿಕಾರಿಗಳಿಗೆ ಪೀಠವು ಸೂಚಿಸಿತು.

ಶೇಕಡಾ 8ರಷ್ಟು ಸಲಿಂಗ ಕಾಮಿಗಳು ಎಚ್ ಐ ವಿ ಪೀಡಿತರಾಗಿದ್ದಾರೆ ಎಂಬುದಾಗಿ 2009ರಲ್ಲಿ ಹೈಕೋರ್ಟಿಗೆ ತಿಳಿಸಲಾಗಿತ್ತು ಎಂಬ ಬಗ್ಗೆ ಗಮನ ಸೆಳೆದ ಪೀಠವು, ದೇಶದಲ್ಲಿನ ಸಲಿಂಗ ಕಾಮಿಗಳ ಹಾಲಿ ಜನಸಂಖ್ಯೆ ಎಷ್ಟು? ಅವರಲ್ಲಿ ಎಷ್ಟು ಮಂದಿ ಎಚ್ಐವಿಯಂತಹ ಗಂಭೀರ ಕಾಯಿಲೆ ತಟ್ಟಿದವರೆಷ್ಟು ಎಂದು ಪೀಠವು ವಿಚಾರಿಸಿತು.

ಆದರೆ ದೇಶದಲ್ಲಿ 23.9 ಲಕ್ಷ ಮಂದಿ ಎಚ್.ಐ.ವಿ. ಬಾಧಿತರಾಗಿದ್ದಾರೆ ಎಂದಷ್ಟೇ ಸರ್ಕಾರ ಹೇಳಿತು. ಸಲಿಂಗ ಕಾಮ ವಿರೋಧಿಸಿದ ಬಲಪಂಥೀಯ ಕಾರ್ಯಕರ್ತರು, ರಾಜಕೀಯ, ಸಮಾಜಿಕ ಹಾಗೂ ಧಾರ್ಮಿ ಸಂಘಟನೆಗಳು ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.