ADVERTISEMENT

ಸಶಕ್ತ ಲೋಕಪಾಲ: ಪ್ರಧಾನಿ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST
ಸಶಕ್ತ ಲೋಕಪಾಲ: ಪ್ರಧಾನಿ ವಿಶ್ವಾಸ
ಸಶಕ್ತ ಲೋಕಪಾಲ: ಪ್ರಧಾನಿ ವಿಶ್ವಾಸ   

ನವದೆಹಲಿ (ಪಿಟಿಐ): ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯತ್ವ ಮತ್ತು ಪ್ರಾಮಾಣಿಕತೆ ಖಾತ್ರಿಗೊಳಿಸಲು ದೀರ್ಘಕಾಲದ ಪ್ರಯತ್ನ ಅಗತ್ಯ ಎಂದಿರುವ ಪ್ರಧಾನಿ ಮನಮೋಹನ್ ಸಿಂಗ್, ಸರ್ಕಾರ ಸಶಕ್ತ ಲೋಕಪಾಲ ಮಸೂದೆ ಜಾರಿಗೊಳಿಸುತ್ತದೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2008ರ ಜನವರಿಯಲ್ಲಿ ನೀಡಲಾದ 2ಜಿ ತರಂಗಾಂತರ ಪರವಾನಗಿಗಳನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ ಸರ್ಕಾರ ಮುಜುಗರಕ್ಕೆ ಸಿಲುಕಿರುವಾಗ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧ ತೀವ್ರ ಟೀಕೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಹೀಗೆ ಹೇಳಿದ್ದಾರೆ.

 ದೇಶದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸರ್ಕಾರ ಕೈಗೊಂಡಿರುವ ಹಲವು ಕ್ರಮದ ಬಗ್ಗೆ ವಿವರಿಸಿದ ಅವರು, ಕಳೆದ ಒಂದು ವರ್ಷದಿಂದ ಈ ದಿಸೆಯಲ್ಲಿ ಗಮನಾರ್ಹ ಪ್ರಗತಿಯಾಗಿದೆ ಎಂದು ಮುಖ್ಯ ಕಾರ್ಯದರ್ಶಿಗಳ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.

ಸಾರ್ವಜನಿಕ ಆಡಳಿತದ ಫಲ ಪ್ರತಿಯೊಬ್ಬರಿಗೂ ಸಕಾಲದಲ್ಲಿ ಲಭ್ಯವಾಗುವಂತೆ ಮಾಡಲು ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕೆಂದು ಕಳೆದ ವರ್ಷ ಇದೇ ಸಮಾವೇಶದಲ್ಲಿ ಪ್ರಸ್ತಾಪಿಸಿದ್ದೆ. ಈ ನಿಟ್ಟಿನಲ್ಲಿ ಕಳೆದೊಂದು ವರ್ಷದಲ್ಲಿ ಸಾಕಷ್ಟು ಪ್ರಗತಿಯಾಗಿದೆ ಎಂದರು.

 ಲಂಚಗುಳಿತನಕ್ಕೆ ತಡೆಯೊಡ್ಡುವ ಉದ್ದೇಶದಿಂದ ಕಳೆದ ವರ್ಷ ಸಂಸತ್ತಿನಲ್ಲಿ ಮಾಹಿತಿ ಹಕ್ಕು ಕಾಯಿದೆ, ನ್ಯಾಯಾಂಗ ಉತ್ತರದಾಯತ್ವ ಕಾಯಿದೆ, ಭ್ರಷ್ಟಾಚಾರದ ವಿರುದ್ಧ ಹೋರಾಡುವವರಿಗೆ ರಕ್ಷಣಾ ಕಾಯಿದೆ, ನಾಗರಿಕ ಸನ್ನದು ಹಾಗೂ ಇ-ಸೇವೆಗಳ ಅಳವಡಿಕೆ ಮಸೂದೆಗಳನ್ನು ಮಂಡಿಸಲಾಗಿದೆ ಎಂದರು.

ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆಗೆ ಕಳೆದ ಸಂಸತ್ ಅಧಿವೇಶನದಲ್ಲಿ ಅಂಗೀಕಾರ ಪಡೆಯಲಾಗದ್ದಕ್ಕೆ ವಿಷಾದ ವ್ಯಕ್ತಪಡಿಸಿದರು.

 ನಾವು ಅನಿಶ್ಚಿತ ಸನ್ನಿವೇಶದಲ್ಲಿ ಬದುಕುತ್ತಿದ್ದು ರಾಷ್ಟ್ರದ ವಿವಿಧ ಕ್ಷೇತ್ರಗಳ ಹಲವು ಸವಾಲುಗಳಿವೆ. ಪ್ರಮುಖವಾಗಿ ಜೀವನೋಪಾಯ ಭದ್ರತೆ, ಆರ್ಥಿಕ ಭದ್ರತೆ, ಇಂಧನ ಭದ್ರತೆ, ಪರಿಸರ ಭದ್ರತೆ ಹಾಗೂ ರಾಷ್ಟ್ರೀಯ ಭದ್ರತೆಗಳಿಗೆ ಸಂಬಂಧಿಸಿದ ಸವಾಲುಗಳು ಇವಾಗಿವೆ ಎಂದರು.

`ಇವು ನೀಗಲಾಗದ ಸಮಸ್ಯೆಗಳೇನಲ್ಲ ಎಂಬ ನಂಬಿಕೆಯೊಂದಿಗೆ ಅವನ್ನು ಹಿಮ್ಮೆಟ್ಟಿಸಲು ಕಾರ್ಯತಂತ್ರಗಳನ್ನು ರೂಪಿಸಬೇಕಾಗಿದೆ. ರಾಷ್ಟ್ರ ಈ ಹಿಂದೆಅನೇಕ ಸಂಕಷ್ಟಗಳನ್ನು ಹಿಮ್ಮೆಟ್ಟಿಸಿದ ಉದಾಹರಣ ಗಳಿವೆ. ಈಗಲೂ ನಾವೆಲ್ಲಾ ಒಮ್ಮನಸ್ಸಿನಿಂದ ಪರಿಸ್ಥಿತಿ ಎದುರಿಸಿದರೆ ಯಶಸ್ಸು ಸಾಧಿಸುವುದರಲ್ಲಿ ಅನುಮಾನವಿಲ್ಲ~ ಎಂದು ಸಿಂಗ್ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.