ADVERTISEMENT

ಸಹಬಾಳ್ವೆ: ‘ಸುಪ್ರೀಂ’ ಮಾರ್ಗದರ್ಶಿ ಸೂತ್ರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2013, 19:30 IST
Last Updated 1 ಡಿಸೆಂಬರ್ 2013, 19:30 IST

ನವದೆಹಲಿ(ಪಿಟಿಐ): ಕೌಟುಂಬಿಕ ದೌರ್ಜನ್ಯ ತಡೆ (ಡಿವಿ) ಕಾಯ್ದೆಯಡಿಯಲ್ಲಿ ಮಹಿಳೆಯರಿಗೆ ರಕ್ಷಣೆ ಒದಗಿಸಿಕೊಡುವ ಸಲುವಾಗಿ  ಸ್ತ್ರೀ– ಪುರುಷರು ಪರಸ್ಪರ ಒಪ್ಪಿಗೆ ಮೇಲೆ ಸಹಬಾಳ್ವೆ ನಡೆಸುವ ಜೀವನ ಪದ್ಧತಿ ಕುರಿತಂತೆ ಸುಪ್ರೀಂ ಕೋರ್ಟ್‌ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ರಚಿಸಿದೆ.

ಇಂತಹ ಸಹಬಾಳ್ವೆಯನ್ನು ‘ವೈವಾಹಿಕ ಜೀವನ’ದ ಚೌಕಟ್ಟಿಗೆ ತರಲು ಸೂಕ್ತ ಕಾನೂನು ತಿದ್ದುಪಡಿ  ತರಬೇಕು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಸಂಸತ್ತಿಗೆ ಸಲಹೆ ನೀಡಿತ್ತು. ಈ ನಿಟ್ಟಿನಲ್ಲಿ ಸಹಬಾಳ್ವೆಯ ಅವಧಿ, ಹೊಣೆಗಾರಿಕೆ ಹಂಚಿಕೆ, ಲೈಂಗಿಕ ಸಂಬಂಧ ಹಾಗೂ ಮಕ್ಕಳ ಪೋಷಣೆ ಮತ್ತು ಸಂಪನ್ಮೂಲ ಕ್ರೋಡೀಕರಣ ಮತ್ತಿತರ ಅಂಶಗಳನ್ನು ಆಧರಿಸಿ ಎಂಟು ಮಾರ್ಗದರ್ಶಿ ಸೂತ್ರ­ಗಳನ್ನು ನ್ಯಾಯಮೂರ್ತಿ ಕೆ.ಎಸ್‌. ರಾಧಾಕೃಷ್ಣನ್‌ ಮತ್ತು ಪಿನಾಕಿ ಚಂದ್ರ ಘೋಸೆ ಅವರನ್ನು ಒಳಗೊಂಡ ಪೀಠ ರಚಿಸಿದೆ.

‘ಈ 8 ಮಾರ್ಗದರ್ಶಿ ಸೂತ್ರಗಳು ಸಮಗ್ರ­ವೇನೂ ಅಲ್ಲ, ಆದರೆ, ಸಹಬಾಳ್ವೆಯ ಜೀವನ ಪದ್ಧತಿ ಕುರಿತಂತೆ ಕೆಲವು ಒಳನೋಟಗಳನ್ನು ಈ ಸೂತ್ರಗಳು ಖಂಡಿತ ಒಳಗೊಂಡಿವೆ’ ಎಂದು ಪೀಠ ಅಭಿಪ್ರಾಯ­ಪಟ್ಟಿದೆ. ಮಾರ್ಗದರ್ಶಿ ಸೂತ್ರ: ಸಹಬಾಳ್ವೆ ಅವಧಿ– ‘ಡಿವಿ’ ಕಾಯ್ದೆಯ 2(ಎಫ್‌) ಕಲಂ ಅನ್ವಯ ‘ಯಾವುದೇ ಅವಧಿ’.

ಅಂದರೆ, ಜೊತೆಯಾಗಿ ಬದುಕು ನಿರ್ವಹಿ­ಸುವ ಮತ್ತು ಅದನ್ನು ಮುಂದುವರಿಸುವಂತಹ ಜವಾ­ಬ್ದಾರಿ­ಯುತ ಅವಧಿ. ಇದು ಪ್ರಕರಣದಿಂದ ಪ್ರಕರಣಕ್ಕೆ ಮತ್ತು ಆಯಾ ಪ್ರಕರಣಗಳ ವಾಸ್ತವ ಸನ್ನಿವೇಶವನ್ನು ಅಧರಿಸಿರುತ್ತದೆ. ಸಂಪನ್ಮೂಲ ಕ್ರೋಡೀಕರಣ: ಪರಸ್ಪರ  ನೆರವು ಇಲ್ಲವೆ, ಇಬ್ಬರಲ್ಲಿ ಒಬ್ಬರು ಹೊಣೆ ಹೊರುವುದನ್ನು ಅವಲಂಬಿಸಿದೆ.

ಹಣಕಾಸು ಮತ್ತು ಬ್ಯಾಂಕ್‌ ಉಳಿ­ತಾಯ ಖಾತೆಯಲ್ಲಿ ಪಾಲುದಾರಿಕೆ, ಸ್ಥಿರಾಸ್ತಿಯನ್ನು ಜಂಟಿ ಹೆಸರಿನಲ್ಲಿ ನೋಂದಾಯಿಸುವುದು ಅಥವಾ ಮಹಿಳೆಯ ಹೆಸರಿನಲ್ಲಿ ನೋಂದಾಯಿಸುವುದು. ದೀರ್ಘ­ಕಾಲದ ಹೂಡಿಕೆಯನ್ನು ವೈಯಕ್ತಿಕ ಇಲ್ಲವೆ ಜಂಟಿ ಹೆಸರಿನಲ್ಲಿ ಮಾಡುವುದು ದೀರ್ಘ ಕಾಲದ ಸಹಬಾಳ್ವೆಗೆ ಅನುಕೂಲಕರ.

ಹೊಣೆಗಾರಿಕೆ ಹಂಚಿಕೆ: ಕುಟುಂಬ ನಿರ್ವಹಣೆ­ಯಲ್ಲಿ  ಪರಸ್ಪರ ನಂಬಿಕೆ ಮತ್ತು ಜವಾಬ್ದಾರಿಯಿಂದ ನಡೆದುಕೊಳ್ಳುವುದು ಅತಿ ಮುಖ್ಯ. ಮುಖ್ಯವಾಗಿ  ಕುಟುಂಬ ನಿರ್ವಹಣೆಯು ಮಹಿಳೆಯರ ಹೆಗಲಿಗೆ ಬೀಳುತ್ತದೆ. ಮನೆಯ ಸ್ವಚ್ಛತೆ ಮತ್ತು ಒಪ್ಪವಾಗಿ ಇಡುವುದು, ಅಡುಗೆ ಸಿದ್ಧ ಮಾಡುವುದು ಬಹು­ಪಾಲು ಮಹಿಳೆಯ ಜವಾಬ್ದಾರಿಯೇ ಆಗಿರುತ್ತದೆ.

ADVERTISEMENT

ಆದ್ದರಿಂದ ಸಹಬಾಳ್ವೆಯು ‘ವೈವಾಹಿಕ ಜೀವನ’ದಿಂದ ಬೇರೆಯಲ್ಲ. ಲೈಂಗಿಕ ಸಂಬಂಧ ಮತ್ತು ಮಕ್ಕಳ ಪೋಷಣೆ: ‘ವೈವಾಹಿಕ ದಾಂಪತ್ಯ’ದಂತಹ ಪರಸ್ಪರ ಒಪ್ಪಿಗೆಯ ಸಹಜೀವನದಲ್ಲಿ ಲೈಂಗಿಕ ಸಂಬಂಧವೂ ಇರುತ್ತದೆ. ಇದು ಕೇವಲ ಇಂದ್ರಿಯ ಸುಖಭೋಗವಲ್ಲ, ಸಂತನಾ­ಭಿವೃದ್ಧಿಗಾಗಿ ಭಾವನಾತ್ಮಕ ಮತ್ತು ಅನ್ಯೋನ್ಯತೆಯ ಸಂಬಂಧವೂ ಆಗಿದೆ.

ಸಂತನಾಭಿವೃದ್ಧಿಯು ಸಹಬಾಳ್ವೆ  ಪದ್ಧತಿಯನ್ನು ‘ವೈವಾಹಿಕ ಜೀವನ’ ಎನ್ನುವುದನ್ನು ಎತ್ತಿತೋರಿಸು­ವಂತಹ ಕುರುಹು ಮತ್ತು ಇದು ದೀರ್ಘಕಾಲದ ಬದುಕಿನ ಉದ್ದೇಶ ಕೂಡ. ಮಕ್ಕಳ ಅಭ್ಯುದಯಕ್ಕಾಗಿ ಪರಸ್ಪರ ಹೊಣೆಗಾರಿಕೆ ಹಂಚಿಕೊಳ್ಳುವುದು ಮತ್ತು ಬೆಂಬಲವಾಗಿರುವುದು ಸಹ ‘ವೈವಾಹಿಕ ದಾಂಪತ್ಯ’ದ ಹೆಗ್ಗುರುತು. 

ಹಿನ್ನೆಲೆ: ಸಹಬಾಳ್ವೆ ನಡೆಸುತ್ತಿದ್ದ ಮಹಿಳೆಯೊಬ್ಬರು ಸಂಗಾತಿಯಿಂದ ದೂರವಾಗಿ ಜೀವನ ನಿರ್ವಹಣೆಗೆ ಜೀವನಾಂಶ ಕೊಡಿಸಿಕೊಡಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಈ ಸೂತ್ರವನ್ನು ಪೀಠ ರಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.