ADVERTISEMENT

ಸಾಗರೋತ್ತರ ಕಾರ್ಮಿಕರಿಗೆ ಪಿಂಚಣಿ, ವಿಮೆ ಯೋಜನೆ: ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:30 IST
Last Updated 8 ಜನವರಿ 2012, 19:30 IST

ಜೈಪುರ (ಪಿಟಿಐ): ಸಾಗರೋತ್ತರ ಭಾರತೀಯ ಕಾರ್ಮಿಕರ ಹಿತ ಕಾಪಾಡುವ ಉದ್ದೇಶದಿಂದ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾನುವಾರ ಹೊಸ ಪಿಂಚಣಿ ಮತ್ತು ವಿಮಾ ಯೋಜನೆಯನ್ನು ಪ್ರಕಟಿಸುವ ಮೂಲಕ ಸಾಗರೋತ್ತರ ಕಾರ್ಮಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದಾರೆ.

ಸಾಗರೋತ್ತರ ದೇಶಗಳಲ್ಲಿ ಅದರಲ್ಲೂ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 50 ಲಕ್ಷ ಭಾರತೀಯ ಕಾರ್ಮಿಕರಿಗೆ ಪ್ರಧಾನಿ ಅವರ ಘೋಷಣೆಯಿಂದ ಭವಿಷ್ಯದ ಭದ್ರತೆ ದೊರಕಿದೆ.

10ನೇ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಅವರು, ಸಾಗರೋತ್ತರ ಭಾರತೀಯ ಕಾರ್ಮಿಕರ ಪಿಂಚಣಿ ಮತ್ತು ಜೀವ ವಿಮೆ ನಿಧಿ ಯೋಜನೆಯನ್ನು ಆರಂಭಿಸುವ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು.

ADVERTISEMENT

ಈ ಯೋಜನೆಯಿಂದ ವಿದೇಶದಲ್ಲಿ ನೆಲಸಿರುವ ಕಾರ್ಮಿಕರು ತಮ್ಮ ನಿವೃತ್ತಿಯ ನಂತರದ ಜೀವನಕ್ಕೆ ಅಗತ್ಯವಾದ ಹಣವನ್ನು ಸ್ವಪ್ರೇರಣೆಯಿಂದ ಉಳಿತಾಯ ಮಾಡಲು ಪ್ರೋತ್ಸಾಹಿಸುತ್ತದೆ ಎಂದು ಸಿಂಗ್ ತಿಳಿಸಿದ್ದಾರೆ.

ಪ್ರಧಾನಿ ಅವರು ಈ ಯೋಜನೆಯನ್ನು ಪ್ರಕಟಿಸುತ್ತಿದ್ದಂತೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ 60 ರಾಷ್ಟ್ರಗಳ 1,900 ಪ್ರತಿನಿಧಿಗಳು ದೀರ್ಘ ಕರತಾಡನ ಮಾಡಿದರು.

ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿರುವ ಯೋಜನೆಯ ಪ್ರಕಾರ ಭಾರತದ ವಿದೇಶಿ ಕಾರ್ಮಿಕರ ಸ್ವಾಭಾವಿಕ ಸಾವಿನ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ವಿಮಾ ಹಣ ದೊರಕುತ್ತದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಹೊಸ ಪಿಂಚಣಿ ಮತ್ತು ವಿಮೆ ಯೋಜನೆಯ ಪ್ರಕಾರ ವಿದೇಶದಲ್ಲಿರುವ ಭಾರತೀಯ ಕಾರ್ಮಿಕರು ಪ್ರತಿ ವರ್ಷ ಒಂದು ಸಾವಿರದಿಂದ 12 ಸಾವಿರ ರೂಪಾಯಿಗಳವರೆಗೆ ವಂತಿಗೆ ನೀಡಬೇಕಾಗುತ್ತದೆ. ಸರ್ಕಾರ ಅದಕ್ಕೆ ತನ್ನ ಒಂದು ಸಾವಿರ ರೂಪಾಯಿಗಳ ವಂತಿಗೆಯನ್ನು ಸೇರಿಸುತ್ತದೆ. ಮಹಿಳಾ ಕಾರ್ಮಿಕರಿಗೆ ಇನ್ನೂ ಒಂದು ಸಾವಿರ ಹೆಚ್ಚಿಗೆ ವಂತಿಗೆ ದೊರಕುತ್ತದೆ.

ಅನಿವಾಸಿ ಭಾರತೀಯರಿಗೂ ಮತದಾನದ ಹಕ್ಕು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ 1950ರ ಜನಪ್ರಾತಿನಿಧ್ಯ ಕಾಯ್ದೆಯಡಿ ಅನಿವಾಸಿ ಭಾರತಿಯರ ಹೆಸರು ನೋಂದಾವಣೆಗೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಮತದಾನದಲ್ಲಿ ಪಾಲ್ಗೊಳ್ಳಲು ಅನುಕೂಲವಾಗಲೆಂದು ಭಾರತೀಯ ಪೌರತ್ವ ಕಾಯ್ದೆಯ ತಿದ್ದುಪಡಿ ಮಸೂದೆಯನ್ನು ಕಳೆದ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಉದ್ಯೋಗ ಅರಸಿಕೊಂಡು ದೇಶದಿಂದ ವಲಸೆ ಹೋದವರು ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.

`ವಿದೇಶದಲ್ಲಿನ ಭಾರತೀಯರ ಸುರಕ್ಷತೆಗೆ ಸೂಕ್ತ ಕ್ರಮ~

ಜೈಪುರ (ಪಿಟಿಐ): ಇತ್ತೀಚಿನ ದಿನಗಳಲ್ಲಿ ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತಿರುವ ಕೊಲ್ಲಿ ಮತ್ತು ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿಯ ಭಾರತೀಯರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಅಲ್ಲಿಯ ಸರ್ಕಾರಗಳನ್ನು ಕೋರಲಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ತಿಳಿಸಿದರು.

10ನೇ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, `ರಾಜಕೀಯ ಅಸ್ಥಿರತೆ ಎದುರಿಸುತ್ತಿರುವ ರಾಷ್ಟ್ರಗಳಲ್ಲಿಯ ಭಾರತೀಯರ ಸುರಕ್ಷತೆಯ ಬಗ್ಗೆ ನಮಗೆ ಆತಂಕವಿದೆ~ ಎಂದು ತಿಳಿಸಿದ್ದರು.

`ಪಶ್ಚಿಮ ಏಷ್ಯಾ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಸುಮಾರು 60 ಲಕ್ಷ ಭಾರತೀಯರು ಉದ್ಯೋಗದಲ್ಲಿ ಇದ್ದಾರೆ. ಕೆಲವು ರಾಷ್ಟ್ರಗಳಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಸಂಭವಿಸುತ್ತಿರುವುದರಿಂದ ನಮ್ಮ ದೇಶದ ನಾಗರಿಕರ ಸುರಕ್ಷತೆಯ ಬಗ್ಗೆ ಆತಂಕಗೊಂಡು ಅಲ್ಲಿಯ ಸರ್ಕಾರವನ್ನು ಸಂಪರ್ಕಿಸಿ ಸೂಕ್ತ ರಕ್ಷಣೆಗೆ ಮನವಿ ಮಾಡಲಾಗಿದೆ~ ಎಂದು ಪ್ರಧಾನಿ ಹೇಳಿದರು.

ವಿದೇಶದಲ್ಲಿ ಉದ್ಯೋಗದಲ್ಲಿರುವ ಭಾರತೀಯರಿಗೆ ತೀರಾ ತೊಂದರೆಯಾದ ಸಂದರ್ಭದಲ್ಲಿ ತುರ್ತಾಗಿ ಅವರನ್ನು ತಾಯ್ನಾಡಿಗೆ ಕರೆಯಿಸಿಕೊಳ್ಳುವ ವ್ಯವಸ್ಥೆ ನಮ್ಮಲ್ಲಿ ಇದೆ. ಲಿಬಿಯಾದಲ್ಲಿ ಆಂತರಿಕ ಕ್ಷೋಭೆ ಉಂಟಾದಾಗ 16 ಸಾವಿರ ಜನರನ್ನು ವಿಶೇಷ ವಿಮಾನ ಮತ್ತು ಹಡಗುಗಳ ಮೂಲಕ ವಾಪಸ್ ಕರೆಯಿಸಿಕೊಳ್ಳಲಾಯಿತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.