ADVERTISEMENT

ಸಾಲ ಮರುಪಾವತಿಸುವ ರೈತರಿಗೆ ಶೇ 4 ದರದ ಸಾಲ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST

ನವದೆಹಲಿ:ನೆರೆ-ಬರ, ದರ ಸಮಸ್ಯೆಗಳಿಗೆ ಸಿಕ್ಕಿ ತೊಳಲಾಡುವ ಕೃಷಿಕರ ನೆರವಿಗೆ ಮುಂದಾಗಿರುವ ಯುಪಿಎ ಸರ್ಕಾರ ಹೊಸ ಬಜೆಟ್‌ನಲ್ಲಿ ‘ಭಾರಿ ಉಡುಗೋರೆ’ ನೀಡಿದೆ. ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ರೈತರಿಗೆ ಮಾತ್ರ ಶೇ.4 ಬಡ್ಡಿ ದರದಲ್ಲಿ ಸಾಲ ಯೋಜನೆ ಪ್ರಕಟಿಸಿದೆ.

ನಿಗದಿತ ಸಮಯಕ್ಕೆ ಸಾಲ ಪಾವತಿ ಮಾಡುವ ಎಲ್ಲ ರೈತರಿಗೂ ಈ ಸೌಲಭ್ಯ ದೊರೆಯಲಿದೆ. ಕಳೆದ ಬಜೆಟ್‌ನಲ್ಲಿ ಸಕಾಲಕ್ಕೆ ಸಾಲ ಪಾವತಿಸುವ ಕೃಷಿಕರಿಗೆ  ಶೇ.5 ಬಡ್ಡಿದರದಲ್ಲಿ ಸಾಲ ನೀಡಲಾಗಿತ್ತು. ಈಗ ಇನ್ನೂ ಕಡಿತ ಮಾಡಲಾಗಿದೆ. ಸರ್ಕಾರದ ನಿರ್ಧಾರದಿಂದಾಗಿ ರೈತರು ತಕ್ಕಮಟ್ಟಿಗೆ ನಿರಾಳವಾಗಿದ್ದಾರೆ. ಸಮಯಕ್ಕೆ ಸಾಲ ಕಟ್ಟದ ರೈತರಿಗೆ ಇದು ಅನ್ವಯ ಆಗುವುದಿಲ್ಲ.

ಈ ಸಲದ ಕೃಷಿ ಸಾಲದ ಗುರಿಯನ್ನು ಒಂದು ಲಕ್ಷ ಕೋಟಿ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಕೃಷಿ ಸಾಲದ ಮೊತ್ತ 4.75 ಲಕ್ಷ ಕೋಟಿಗೆ ಏರಿದೆ. ಸಾಲ ವಿತರಣೆಯಲ್ಲಿ ಸಣ್ಣ, ಅತೀ ಸಣ್ಣ ರೈತರಿಗೆ  ಆದ್ಯತೆ ನೀಡುವಂತೆ ಬ್ಯಾಂಕುಗಳಿಗೆ ಸೂಚಿಸಲಾಗಿದೆ.

2,200ಕೋಟಿ ಅನುದಾನ ನಿಗದಿ
ಆಹಾರ ಪದಾರ್ಥಗಳ ಬೆಲೆ ಏರಿಕೆ ನಿಯಂತ್ರಿಸುವ ಕ್ರಮವಾಗಿ ತರಕಾರಿ, ಪೌಷ್ಟಿಕ ಆಹಾರ ಧಾನ್ಯ, ಎಣ್ಣೆ ಬೀಜದ ಉತ್ಪಾದನೆ ಪ್ರೋತ್ಸಾಹಕ್ಕೆ ಬಜೆಟ್‌ನಲ್ಲಿ 2,200 ಕೋಟಿ ನಿಗದಿ ಮಾಡಲಾಗಿದೆ.ಪೂರ್ವ  ರಾಜ್ಯಗಳಲ್ಲಿ ಜಾರಿಯಲ್ಲಿರುವ ಹಸಿರು ಕ್ರಾಂತಿ ಕಾರ್ಯಕ್ರಮಕ್ಕೆ 400 ಕೋಟಿ, ಬೇಳೆಕಾಳುಗಳ  ಅಭಿವೃದ್ಧಿಗೆ 300 ಕೋಟಿ ಕೊಡಲಾಗಿದೆ.

ತರಕಾರಿ, ಹಣ್ಣು, ಹಾಲು, ಮಾಂಸ, ಕೋಳಿ ಹಾಗೂ ಮೀನು ದರ ಹೆಚ್ಚಳ ಆಹಾರವಸ್ತು ಬೆಲೆ ಏರಿಕೆಗೆ ಕಾರಣವಾಗಿದ್ದು, ಇದು ದರ ಸೂಚ್ಯಂಕಕ್ಕೆ ಶೇ.70 ಕೊಡುಗೆ ನೀಡಿದೆ ಎಂದು ಹಣಕಾಸು ಸಚಿವರು ವಿವರಿಸಿದರು. ಉತ್ಪಾದನೆ-ವಿತರಣೆ ಅಡೆತಡೆ ನಿವಾರಣೆಗೆ ಗಮನ ನೀಡಲಾಗುವುದು. ಬೆಲೆ ಏರಿಕೆ ಸ್ವಲ್ಪ ಮಟ್ಟಿಗೆ ಇಳಿಕೆ ಆಗಿದ್ದರೂ. ಪರಿಸ್ಥಿತಿ ಕಳವಳಕಾರಿಯಾಗಿಯೇ ಮುಂದುವರಿದಿದೆ.

ಹೊಸ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಉದ್ದೇಶ ಕೇಂದ್ರ ಸರ್ಕಾರಕ್ಕಿದೆ. ಕೃಷಿ ವಲಯಕ್ಕೆ ಹೆಚ್ಚು ಅನುದಾನ ನಿಗದಿಪಡಿಸಿ, ಶೇ.4ರಷ್ಟು ಪ್ರಗತಿ ಸಾಧಿಸುವ ರಾಜ್ಯಗಳಿಗೆ ಪ್ರೋತ್ಸಾಹ ನೀಡಲು ಈಗಾಗಲೇ ಜಾರಿಯಲ್ಲಿರುವ ‘ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ’ಗೆ (ಆರ್‌ಕೆವಿವೈ) ಪ್ರತ್ಯೇಕ ಹಣ ಒದಗಿಸಲಾಗಿದೆ. ಕಳೆದ ಸಾಲಿನಲ್ಲಿ ಆರ್‌ಕೆವಿವೈ ಯೋಜನೆಗೆ 6755 ಕೋಟಿ ನೀಡಿದ್ದರೆ, ಈ ವರ್ಷ 7860 ಕೋಟಿ ಕೊಡಮಾಡಲಾಗಿದೆ ಎಂದು ಹಣಕಾಸು ಸಚಿವರು ವಿವರಿಸಿದರು.

ಬೇಳೆ ಕಾಳುಗಳ ಉತ್ಪಾದನೆಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಸ್ವಾವಲಂಬಿ ಆಗಬೇಕಿದೆ. ಮಳೆ  ಆಧಾರಿತ ಪ್ರದೇಶದಲ್ಲಿ ಬೇಳೆ ಕಾಳುಗಳ ಉತ್ಪಾದನೆ ಹೆಚ್ಚಳಕ್ಕೆ 300 ಕೋಟಿ ಅನುದಾನದಲ್ಲಿ ಯೋಜನೆ  ಹಾಕಿಕೊಳ್ಳಲಾಗಿದೆ. ಪರಿಣಾಮವಾಗಿ ಈ ವರ್ಷ ಉತ್ಪಾದನೆ 16.5 ದಶಲಕ್ಷ ಟನ್‌ಗೆ ಮುಟ್ಟಲಿದೆ. ಕಳೆದ ವರ್ಷ ಇದು 14.66 ದಶಲಕ್ಷ ಟನ್ ಇತ್ತು.

ದುಬಾರಿ ಅಡುಗೆ ಎಣ್ಣೆ ಆಮದು ತಗ್ಗಿಸಲು ತಾಳೆ ಬೆಳೆ ಹೆಚ್ಚಳ ಅನಿವಾರ್ಯವಾಗಿದೆ. ಇದಕ್ಕಾಗಿ 300ಕೋಟಿ ತೆಗೆದಿರಿಸಲಾಗಿದೆ. 60 ಸಾವಿರ ಹೆಕ್ಟೇರ್‌ನಲ್ಲಿ ತಾಳೆ ಬೆಳೆ ಪ್ರೋತ್ಸಾಹಿಸಲಾಗುತ್ತಿದೆ.

ಈ ಪ್ರಯತ್ನದಿಂದಾಗಿ ಐದು ವರ್ಷ ವಾರ್ಷಿಕ 3ಲಕ್ಷ ಮೆ.ಟನ್ ತಾಳೆ ಎಣ್ಣೆ ಉತ್ಪಾದನೆ ಆಗಲಿದೆ ಎಂದು ಪ್ರಣವ್ ಸ್ಪಷ್ಟಪಡಿಸಿದರು. ಸದ್ಯ ನಮ್ಮ ಅಗತ್ಯದಲ್ಲಿ ಶೇ. 50ರಷ್ಟನ್ನು ಮಾತ್ರ ಪೂರೈಸಲು ಸಾಧ್ಯವಾಗಿದೆ. ಉಳಿದಿದ್ದನ್ನು  ಆಮದು ಮಾಡಿಕೊಳ್ಳಲಾಗುತ್ತಿದೆ.

ಕಡಿಮೆ ಬೆಲೆಯಲ್ಲಿ ಗುಣಮಟ್ಟದ ತರಕಾರಿ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪೌಷ್ಟಿಕ ಆಹಾರ ಧಾನ್ಯ, ಮೇವು ಉತ್ಪನ್ನ ಹೆಚ್ಚಳಕ್ಕೆ ತಲಾ 300 ಕೋಟಿ ಒದಗಿಸಲಾಗಿದೆ ಎಂದು ಹಣಕಾಸು ಸಚಿವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT