ADVERTISEMENT

ಸಿಗದ ಆಶ್ರಯ; ತಪ್ಪದ ಅಲೆದಾಟ ver.99

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 14:50 IST
Last Updated 21 ಜನವರಿ 2011, 14:50 IST

ಆಶ್ರಯ ಮನೆಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಫಲಾನುಭವಿಗಳಿಗೆ ಎಲ್ಲವೂ ನಿರೀಕ್ಷೆಯಂತೆ ನಡೆದರೆ, ಸರ್ಕಾರ ತಕ್ಷಣ ಅನುದಾನ ನೀಡಿದರೆ, ದಿಬ್ಬೂರಿನ ನಿವೇಶನವೇ ಅಂತಿಮವಾದರೆ ಖಂಡಿತ ಈ ವರ್ಷ ಸ್ವಂತ ಸೂರು ಸಿಗಲಿದೆ.

ಮತ್ತೆ ಜನಪ್ರತಿನಿಧಿಗಳ ‘ರಾಜಕೀಯ’ ಮತ್ತು ಜಿಲ್ಲಾಡಳಿತ, ಮಹಾನಗರ ಪಾಲಿಕೆ ದಿವ್ಯ ನಿರ್ಲಕ್ಷ್ಯ ಮುಂದುವರಿದರೆ ಬಡವರ ಸೂರಿನ ಕನಸು ಮತ್ತಷ್ಟು ‘ಗಗನ ಕುಸುಮ’ ಆಗುವುದರಲ್ಲಿ ಅನುಮಾನವೇ ಇಲ್ಲ.

-ಇಂತಹ ಮಾತುಗಳು ಅಧಿಕಾರಶಾಹಿ ವರ್ಗದ ನಡುವೆ ಮತ್ತು ಆಶ್ರಯ ಮನೆಗಳಿಗಾಗಿ ಹೋರಾಟ ನಡೆಸುತ್ತಿರುವ ಸಂಘಟನೆಗಳ ಒಳಗೂ ಧ್ವನಿಸುತ್ತಿದೆ. ನಗರದ ಹತ್ತಿರದಲ್ಲಿ ನಿವೇಶನಕ್ಕೆ ಸೂಕ್ತ ಜಾಗ ಸಿಗದೆ, ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಆಶ್ರಯ ಮನೆ ಕೊಡಲೇಬೇಕೆಂಬ ಇಚ್ಛಾಶಕ್ತಿಯನ್ನು ತೋರದೆ ಯೋಜನೆ ನೆನೆಗುದಿಗೆ ಬಿದ್ದಿರುವುದನ್ನು ಯಾರೂ ಕೂಡ ಅಲ್ಲಗಳೆಯುವುದಿಲ್ಲ.

ಅದರಲ್ಲೂ ಸಾಕಷ್ಟು ಪ್ರಚಾರ ನಡೆಸಿದ್ದರೂ ಯೋಜನೆಯ ಫಲ ಪಡೆಯಲು ಅರ್ಹರು ಮುಂದೆ ಬರುತ್ತಿಲ್ಲ. ಹಾಗಾಗಿಯೇ ಈ ಬಾರಿ ಬಂದಿರುವ ಅರ್ಜಿಗಳು ಕಡಿಮೆಯೇ ಎನ್ನುವುದು ಪಾಲಿಕೆ ಅಧಿಕಾರಿಗಳ ವಾದ.

ಆದರೆ, 1992ರಿಂದ ಈವರೆಗೂ ಒಂದೇ ಒಂದು ನಿವೇಶನ, ಮನೆ ವಿತರಿಸದಿದ್ದ ಮೇಲೆ ಯಾವ ನಂಬಿಕೆ, ವಿಶ್ವಾಸ ಹಾಗೂ ಭರವಸೆ ಮೇಲೆ ಅರ್ಜಿ ಸಲ್ಲಿಸುವುದು? ಎನ್ನುವುದು ಫಲಾನುಭವಿಗಳ ಪ್ರಶ್ನೆ.

ಪಾಲಿಕೆ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ನಗರದಲ್ಲಿ ಆಶ್ರಯ ವಂಚಿತ ಫಲಾನುಭವಿಗಳಿಗೆ 2010-11ನೇ ಸಾಲಿನಲ್ಲಿ 600 ಆಶ್ರಯ ನಿವೇಶನ ಮತ್ತು ಮನೆಗಳನ್ನು ಒದಗಿಸಲು ಗುರಿ ನಿಗದಿಪಡಿಸಲಾಗಿದೆ.
 
ಆದರೆ, ಅರ್ಜಿಗಳು ಬಂದಿರುವುದು ತೀರಾ ಕಡಿಮೆ. 120 ಮಂದಿ ಫಲಾನುಭವಿಗಳ ಪಟ್ಟಿಯನ್ನು ಮಾತ್ರ ಸಿದ್ಧಪಡಿಸಲಾಗಿದೆ. ಜತೆಗೆ ಆಶ್ರಯ ಯೋಜನೆಗಾಗಿ ಸರ್ಕಾರದಿಂದ ಅನುದಾನ ಕೂಡ ಬಿಡುಗಡೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.