ADVERTISEMENT

ಸಿವಿಸಿ ವ್ಯಾಪ್ತಿಗೆ ರಾಜಕಾರಣಿಗಳು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 18:10 IST
Last Updated 15 ಫೆಬ್ರುವರಿ 2011, 18:10 IST

ನವದೆಹಲಿ (ಪಿಟಿಐ): ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಡೆಗಟ್ಟಲು ರಾಜಕಾರಣಿಗಳನ್ನು ಕೇಂದ್ರ ಜಾಗೃತ ಆಯೋಗ (ಸಿವಿಸಿ)ದ ಪರಿಧಿಯೊಳಗೆ ತರಬೇಕೆಂದು ಮಾಜಿ ಕೇಂದ್ರ ಜಾಗೃತ ಆಯುಕ್ತ ಪ್ರತ್ಯುಷ್ ಸಿನ್ಹಾ ನುಡಿದರು.

 2ಜಿ ತರಂಗಾಂತರ, ಕಾಮನ್‌ವೆಲ್ತ್ ಕ್ರೀಡೆ ಹಾಗೂ  ಆದರ್ಶ ಸೊಸೈಟಿ ಹಗರಣಗಳಂತಹ ಭಾರಿ ಭ್ರಷ್ಟಾಚಾರಗಳ ಕುರಿತು ನೇರ ತನಿಖೆ ನಡೆಸಲು ವಿಶೇಷ ತನಿಖಾ ಅಧಿಕಾರಿಗಳ ತಂಡವನ್ನು ನೇಮಿಸಬೇಕಲ್ಲದೆ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರಬೇಕಾದ ಅಗತ್ಯವನ್ನು ಅವರು ಒತ್ತಿಹೇಳಿದರು.

 ‘ಸಿವಿಸಿ ಎನ್ನುವುದು ಒಂದು ಸಣ್ಣ ಸಂಸ್ಥೆಯಾಗಿದ್ದು ಸಾಮಾನ್ಯವಾಗಿ ವಿವಿಧ ಸಂಸ್ಥೆಗಳ ಮುಖ್ಯ ಜಾಗೃತ ಅಧಿಕಾರಿಗಳ ನೆರವಿನಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳನ್ನು ನೇಮಿಸುವ ಮೂಲಕ ಮತ್ತು ಸೇವಾ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಸಿವಿಸಿಯನ್ನು ಬಲಪಡಿಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.

 ‘ಸಿವಿಸಿ ನೇರವಾಗಿ ತನಿಖೆ ನಡೆಸಿರುವ  ಪ್ರಕರಣಗಳಲ್ಲೆಲ್ಲ ಪರಿಣಾಮಕಾರಿಯಾದ ಫಲಿತಾಂಶ ಕಂಡುಬಂದಿದ್ದರೂ ಸಹ 2 ಜಿ ತರಂಗಾಂತರದಂತಹ ಪ್ರಕರಣದ ತನಿಖೆಗೆ ಅನುಭವ ಹೊಂದಿದ ಅಧಿಕಾರಿಗಳ ಪ್ರತ್ಯೇಕ ತಂಡದ ಅಗತ್ಯವಿದೆ ಎಂದು ಸಿನ್ಹಾ ನುಡಿದರು.

 ಭ್ರಷ್ಟಾಚಾರ ದೇಶದ ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿದ್ದು ನ್ಯಾಯಾಲಯಗಳಲ್ಲಿರುವ ವಿಚಾರಣೆಯಲ್ಲಿರುವ ಭ್ರಷ್ಟಾಚಾರ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಬೇಕಾಗಿದೆ ಎಂದರು.

‘ಸಿವಿಸಿ ನಿಯಮಿತ ವ್ಯಾಪ್ತಿಯನ್ನು ಹೊಂದಿದ್ದು ಭಾರತ ಸರ್ಕಾರದ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ಅಧೀನದ ಸಂಸ್ಥೆಗಳಿಗೆ ಮಾತ್ರ ಅದರ ವ್ಯಾಪ್ತಿ ಹರಡಿಕೊಂಡಿದೆ. ಸಲಹೆ ಮತ್ತು ಶಿಫಾರಸುಗಳನ್ನು ಮಾಡುವುದೇ ಸಿವಿಸಿಯ ಪ್ರಮುಖ ಕಾರ್ಯವಾಗಿರುವುದರಿಂದ ಭ್ರಷ್ಟಾಚಾರವನ್ನು ಹತ್ತಿಕ್ಕುವಲ್ಲಿ ಅದರ ಕಾರ್ಯ ನಗಣ್ಯವಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.