ADVERTISEMENT

‘ಸುಪ್ರೀಂ’ ತೀರ್ಪಿನ ಅನುಷ್ಠಾನಕ್ಕೆ ಕಾಲಾವಕಾಶ ಕೋರಿದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ಕುರಿತು ಯೋಜನೆ (ಸ್ಕೀಂ) ರೂಪಿಸುವಂತೆ ನೀಡಿರುವ ತೀರ್ಪಿನ ಅನುಷ್ಠಾನಕ್ಕಾಗಿ ಮೂರು ತಿಂಗಳುಗಳ ಕಾಲಾವಕಾಶ ನೀಡುವಂತೆ ಶನಿವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ಕೇಂದ್ರ ಸರ್ಕಾರ, ಯೋಜನೆಯ ಕುರಿತು ಸ್ಪಷ್ಟ ನಿರ್ದೇಶನ ನೀಡುವಂತೆಯೂ ಮನವಿ ಮಾಡಿದೆ.

ಕಾವೇರಿ ನೀರು ಹಂಚಿಕೆಗಾಗಿ ಯೋಜನೆ ರೂಪಿಸಲು ಆರು ವಾರಗಳ ಗಡುವು ನೀಡಿ ಫೆಬ್ರುವರಿ 16ರಂದು ಪ್ರಕಟವಾಗಿರುವ ತೀರ್ಪಿನ ಅನುಷ್ಠಾನಕ್ಕೆ ಮುಂದಾದಲ್ಲಿ ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿರುವ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ ಎಂದು ಕೇಂದ್ರದ ಜಲಸಂಪನ್ಮೂಲ ಸಚಿವಾಲಯ ಸಲ್ಲಿಸಿರುವ ಮೇಲ್ಮನವಿಯಲ್ಲಿ ಆತಂಕ ವ್ಯಕ್ತವಾಗಿದೆ.

ಕಾವೇರಿ ನದಿ ನೀರಿನ ವಿಷಯವು ಕರ್ನಾಟಕದ ಜನರ ಭಾವನೆಗಳೊಂದಿಗೆ ಮೇಳೈಸಿದೆ. ನದಿ ನೀರು ಹಂಚಿಕೆ ವಿಷಯದಲ್ಲಿ, ಈ ಹಿಂದೆ ಅನೇಕ ಬಾರಿ ನಿಯಂತ್ರಣಕ್ಕೆ ಬಾರದಂತೆ ಕಾನೂನು ಸುವ್ಯವಸ್ಥೆ ಹದಗೆಟ್ಟ ಉದಾಹರಣೆಗಳಿವೆ. ಅಲ್ಲದೆ, ಪ್ರಾಣಹಾನಿ ಹಾಗೂ ಆಸ್ತಿಪಾಸ್ತಿಗೂ ಹಾನಿ ಉಂಟು ಮಾಡಿದ ದುರ್ಘಟನೆಗಳು ನಡೆದಿವೆ ಎಂದು ತಿಳಿಸಲಾಗಿದೆ.

ADVERTISEMENT

ಕಣಿವೆ ವ್ಯಾಪ್ತಿಯ ರಾಜ್ಯಗಳು ಯೋಜನೆಯ ಕುರಿತು ವಿಭಿನ್ನ ದೃಷ್ಟಿಕೋನ ಒಳಗೊಂಡಿವೆ. ನೀರು ಹಂಚಿಕೆಗಾಗಿ ಅಂತರರಾಜ್ಯ ಜಲವಿವಾದ ಕಾಯ್ದೆ ಅಡಿ ಯೋಜನೆ ರೂಪಿಸಿದಲ್ಲಿ ಅದು ಕಾವೇರಿ ಜಲವಿವಾದ ನ್ಯಾಯಮಂಡಳಿಯ 2007ರ ಐತೀರ್ಪಿನಲ್ಲಿ ಸೂಚಿಸಿರುವ ಕಾವೇರಿ ನಿರ್ವಹಣಾ ಮಂಡಳಿಗಿಂತ ಭಿನ್ನವಾಗಬಹುದು. ಹಾಗಾಗಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕೇಂದ್ರ ಕೋರಿದೆ.

ಕೋರ್ಟ್‌ ಆದೇಶ ಪಾಲನೆಯ ನಿಟ್ಟಿನಲ್ಲಿ ಈಗಾಗಲೇ ಕಣಿವೆ ವ್ಯಾಪ್ತಿಯ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಆಯೋಜಿಸಿ ಯೋಜನೆ ರೂಪಿಸುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು 12 ಪುಟಗಳ ಮೇಲ್ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಯೋಜನೆ ಕುರಿತು ಕಣಿವೆ ವ್ಯಾಪ್ತಿಯ ರಾಜ್ಯಗಳು ವಿಭಿನ್ನ ದೃಷ್ಟಿಕೋನ ಹೊಂದಿರುವುದರಿಂದ ಸಂಭವನೀಯ ವಿವಾದಕ್ಕೆ ಆಸ್ಪದ ಕೊಡದಿರಲು ಕೋರ್ಟ್‌ ಸ್ಪಷ್ಟನೆ ಅಗತ್ಯವಾಗಿದೆ. ‘ಯೋಜನೆ’ (ಸ್ಕೀಂ) ಎಂದರೆ ಏನು ಎಂಬುದನ್ನು ಸ್ಪಷ್ಟಪಡಿಸಬೇಕಿದೆ ಎಂದು ಕೋರಲಾಗಿದೆ.

ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಯನ್ನು ಸ್ಥಾಪಿಸುವ ಮೂಲಕ ಕೋರ್ಟ್‌ ತೀರ್ಪನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ತಮಿಳುನಾಡು ಸರ್ಕಾರ ಅಭಿಪ್ರಾಯಪಟ್ಟಿದೆ. ಆದರೆ, ಕೇಂದ್ರವು ಕಾವೇರಿ ನಿರ್ವಹಣಾ ಮಂಡಳಿ ರಚಿಸಿದಲ್ಲಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ. ಮೇಲಾಗಿ ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಮಂಡಳಿ ರಚಿಸುವಂತೆ ಹೇಳಿಲ್ಲ. ಈ ಅಂಶವನ್ನು ಗಮನದಲ್ಲಿ ಇರಿಸಿಕೊಂಡು ನಿರ್ಣಯ ಅನುಷ್ಠಾನ ಸಮಿತಿ ರಚಿಸುವ ಮೂಲಕ ನೀರು ಹಂಚಿಕೆ ಮಾಡಬೇಕು ಎಂದು ಕರ್ನಾಟಕ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.