ನವದೆಹಲಿ (ಪಿಟಿಐ): ಬಂಡವಾಳ ಹೂಡಿಕೆದಾರರಿಗೆ ರೂ. 20 ಸಾವಿರ ಕೋಟಿ ಹಣವನ್ನು ಹಿಂತಿರುಗಿಸಬೇಕೆಂಬ ನ್ಯಾಯಾಲಯದ ಆದೇಶವನ್ನು ಪಾಲಿಸುವಲ್ಲಿ ವಿಫಲವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗದ ಸಹರಾ ಸಮೂಹದ ಎರಡು ಕಂಪೆನಿಗಳ ಮುಖ್ಯಸ್ಥ ಸುಬ್ರತೋ ರಾಯ್ ಅವರ ವಿರುದ್ಧ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ರಹಿತ ವಾರೆಂಟ್ ಹೊರಡಿಸಿತು.
ನ್ಯಾಯಮೂರ್ತಿಗಳಾದ ಕೆ.ಎಸ್.ರಾಧಾಕೃಷ್ಣನ್ ಮತ್ತು ಜೆ.ಎಸ್.ಖೆಹರ್ ಅವರನ್ನು ಒಳಗೊಂಡ ನ್ಯಾಯಪೀಠವು `ಖುದ್ದು ಹಾಜರಿಗೆ ವಿನಾಯಿತಿ ನೀಡಬೇಕೆಂದು ಕೋರಿ ರಾಯ್ ಅವರು ಸಲ್ಲಿಸಿದ್ದ ಮನವಿಯನ್ನು ನಾವು ಮಂಗಳವಾರವೇ ತಿರಸ್ಕರಿಸಿದ್ದೇವೆ. ಬುಧವಾರವೂ ಅವರು ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ನಾವು ಮಾರ್ಚ್ 4 ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸುತ್ತೇವೆ' ಎಂದು ಹೇಳಿತು.
ನ್ಯಾಯಾಲಯದ ಮುಂದೆ ಹಾಜರಾದ ರಾಯ್ ಪರ ವಕೀಲ ರಾಮ್ ಜೇಠ್ಮಲಾನಿ ಅವರು 95 ವರ್ಷದ ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಯ್ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿ ನೀಡಿದರು.
ಈ ಮಾಹಿತಿಗೆ ಆಕ್ಷೇಪ ವ್ಯಕ್ತಪಡಿಸಿದ ಪೀಠವು `ಮಂಗಳವಾರ ನಾವು ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿ ನೀವು ಸಲ್ಲಿಸಿದ್ದ ಮನವಿಯನ್ನಷ್ಟೇ ತಿರಸ್ಕರಿಸಿದ್ದೇವೆ. ನಾವೀಗ ಜಾಮೀನು ರಹಿತ ವಾರೆಂಟ್ ಜಾರಿ ಮಾಡುತ್ತೇವೆ' ಎಂದು ಹೇಳಿತು.
ಇದೇ ವೇಳೆ ಪೀಠವು `ನಿನ್ನೆಯೇ ನಾವು ವಿನಾಯಿತಿ ನೀಡಲು ಸಾಧ್ಯವಿಲ್ಲವೆಂದು ತಿಳಿಸಿದ್ದೇವೆ. ಇತರ ನಿರ್ದೇಶಕರು ನ್ಯಾಯಾಲಯಕ್ಕೆ ಹಾಜರಾಗಿರುವಾಗ, ನಿವೇಕೆ ಹಾಜರಾಗುತ್ತಿಲ್ಲ?' ಎಂದು ಪ್ರಶ್ನಿಸಿತು.
ಪ್ರಕರಣದ ಹಿನ್ನೆಲೆ:
ಬಂಡವಾಳ ಹೂಡಿಕೆದಾರರಿಗೆ ರೂ. 20 ಸಾವಿರ ಕೋಟಿ ಹಣವನ್ನು ಹಿಂತಿರುಗಿಸಬೇಕೆಂಬ ನ್ಯಾಯಾಲಯದ ಆದೇಶವನ್ನು ಪಾಲಿಸುವಲ್ಲಿ ಸಹರಾ ಸಮೂಹದ ಎರಡು ಕಂಪೆನಿಗಳು ವಿಫಲವಾಗಿರುವುದರಿಂದ ಕಂಪೆನಿಯ ಮುಖ್ಯಸ್ಥ ಸುಬ್ರತೋ ರಾಯ್ ಸಹರಾ ಅವರನ್ನು ಬಂಧಿಸಲು ಆದೇಶಿಸುವಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ನ್ಯಾಯಾಲಯ ಆದೇಶ ಉಲ್ಲಂಘಿಸಿರುವ ರಾಯ್ ಸಹರಾ ಹಾಗೂ ಕಂಪೆನಿಯ ಇಬ್ಬರು ನಿರ್ದೇಶಕರಾದ ಅಶೋಕ್ ರಾಯ್ ಚೌಧರಿ ಮತ್ತು ರವಿಶಂಕರ್ ದುಬೆ ಅವರಿಗೆ ಜೈಲು ಶಿಕ್ಷೆ ವಿಧಿಸುವ ಜೊತೆಗೆ, ಈ ಮೂವರ ಪಾಸ್‌ಪೋರ್ಟ್ ಜಪ್ತಿ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ `ಸೆಬಿ' ಮನವಿ ಮಾಡಿದೆ.
ಸಹರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್ (ಎಸ್‌ಐಆರ್‌ಇಸಿ) ಮತ್ತು ಸಹರಾ ಹೌಸಿಂಗ್ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ (ಎಸ್‌ಎಚ್‌ಐಸಿ)ಗಳು ತಮ್ಮ ಕಂಪೆನಿಯಲ್ಲಿ ಹಣ ತೊಡಗಿಸಿರುವವರಿಗೆ ಹಣ ಹಿಂತಿರುಗಿಸುವ ವಿವಾದಕ್ಕೆ ಸಂಬಂಧಿಸಿದಂತೆ ಸೆಬಿ ಹಾಗೂ ಸಹರಾ ಸಮೂಹ ಸಂಸ್ಥೆಗಳು ಕಾನೂನು ಸಮರಕ್ಕಿಳಿದಿವೆ. ಇದಕ್ಕೂ ಮುನ್ನ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರನ್ನೊಳಗೊಂಡ ಪೀಠ, ಹೂಡಿಕೆದಾರರಿಗೆ ಹಣ ಹಿಂತಿರುಗಿಸುವುದಕ್ಕಾಗಿ ನೀಡಿದ್ದ ಕಾಲಾವಕಾಶವನ್ನು 2 ಬಾರಿ ವಿಸ್ತರಿಸಿತ್ತು.
ಆದರೂ ನಿಗದಿತ ಕಾಲಾವಧಿಯಲ್ಲಿ ಕಂಪೆನಿ ಹಣ ಹಿಂತಿರುಗಿಸಲು ವಿಫಲವಾದ್ದರಿಂದ, ಮತ್ತೆ ಕಾಲಾವಕಾಶಕ್ಕೆ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಸುಬ್ರತೋ ರಾಯ್ ಸಹರಾ ಸೇರಿದಂತೆ ಎಸ್‌ಐಆರ್‌ಇಸಿ ಮತ್ತು ಎಸ್‌ಎಚ್‌ಐಸಿ ಕಂಪೆನಿಗಳು ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದ ಆರೋಪವನ್ನು ಎದುರಿಸುತ್ತಿವೆ. ಫೆಬ್ರುವರಿ 6ರಂದು ಸುಪ್ರೀಂಕೋರ್ಟ್ ಸಹರಾ ಸಮೂಹದ ಎರಡು ಕಂಪೆನಿಗಳ ಬ್ಯಾಂಕ್ ಖಾತೆ, ಆಸ್ತಿಯನ್ನು ಜಪ್ತಿ ಮಾಡುವಂತೆ ಸೆಬಿಗೆ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.