ADVERTISEMENT

ಸೆರೆಮನೆಯಿಂದ ಹೊರಬಂದ ಅಣ್ಣಾ ಹಜಾರೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2011, 8:40 IST
Last Updated 19 ಆಗಸ್ಟ್ 2011, 8:40 IST
ಸೆರೆಮನೆಯಿಂದ ಹೊರಬಂದ ಅಣ್ಣಾ ಹಜಾರೆ
ಸೆರೆಮನೆಯಿಂದ ಹೊರಬಂದ ಅಣ್ಣಾ ಹಜಾರೆ   

ನವದೆಹಲಿ (ಪಿಟಿಐ) ಭ್ರಷ್ಟಾಚಾರ ವಿರೋಧಿ ಸಮರದ ನೇತಾರ ಅಣ್ಣಾ ಹಜಾರೆ ಅವರು ಬಲಿಷ್ಠ ಜನಲೋಕಪಾಲ ಮಸೂದೆ ಜಾರಿಗಾಗಿ ಒತ್ತಾಯಿಸುವ ಎರಡು ವಾರಗಳ ಪ್ರತಿಭಟನೆ ಆರಂಭಿಸುವ ಸಲುವಾಗಿ ತಿಹಾರ್ ಸೆರೆಮನೆಯಿಂದ ಶುಕ್ರವಾರ ಹೊರಬಂದರು.

~ತಾವು ಉಳಿದರೂ, ಅಳಿದರೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆಯುತ್ತದೆ~ ಎಂದು ಸೆರೆಮನೆಯಿಂದ ಹೊರಬರುತ್ತಲೇ ತಮ್ಮನ್ನು ಮುತ್ತಿಕೊಂಡು ಜೈಕಾರ ಹಾಕಿದ ಅಭಿಮಾನಿಗಳನ್ನು ಉದ್ದೇಶಿ ಮಾತನಾಡುತ್ತಾ ಹಜಾರೆ ಘೋಷಿಸಿದರು.

ನಾಲ್ಕು ದಿನಗಳ ನಿರಶನದ ಬಳಿಕವೂ ಸ್ವಸ್ಥರಾಗಿ ಲವಲವಿಕೆಯಿಂದ ಕಂಡು ಬಂದ 73ರ ಹರೆಯದ ಸಾಮಾಜಿಕ ಕಾರ್ಯಕರ್ತ, ಸೆರೆಮನೆ ಆವರಣದಲ್ಲೇ ಕಾಯುತ್ತಿದ್ದ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಸಂಕ್ಷಿಪ್ತ ಭಾಷಣ ಮಾಡಿ ~ದ್ವಿತೀಯ ಸ್ವಾತಂತ್ರ್ಯ ಸಂಗ್ರಾಮ~ ಆರಂಭವಾಗಿದೆ ಎಂದು ಹೇಳಿದರು.

~ನಾವು 1947ರಲ್ಲಿ ಸ್ವಾತಂತ್ರ್ಯ ಪಡೆದೆವು. ಈಗ ಆಗಸ್ಟ್ 16ರಂದು ದ್ವಿತೀಯ ಸ್ವಾತಂತ್ರ್ಯ ಸಮರ ಆರಂಭಗೊಂಡಿದೆ. ಕ್ರಾಂತಿಯೊಂದು ಶುರುವಾಗಿದೆ. ನಾನು ಜೀವಂತ ಇದ್ದರೂ ಇಲ್ಲದೇ ಇದ್ದರೂ ಭ್ರಷ್ಟಾಚಾರದ ವಿರುದ್ಧ ಸಮರ ಮುಂದುವರೆಯುತ್ತದೆ~ ಎಂದು ಅವರು ಹೇಳಿದರು.

ಬೆಳಗ್ಗಿನಿಂದಲೇ ಅವರ ಬರುವಿಕೆಗಾಗಿ ಕಾದಿದ್ದ ಬೆಂಬಲಿಗರು ಅಣ್ಣಾ ಮಾತುಗಳನ್ನು ಕೇಳುತ್ತಿದ್ದಂತೆಯೇ ಹರ್ಷೋದ್ಘಾರ ಮಾಡಿ ಚಪ್ಪಾಳೆ ತಟ್ಟಿದರು.

ಪೊಲೀಸ್ ಅಧಿಕಾರಿಗಳ ಬೆಂಗಾವಲಿನೊಂದಿಗೆ ಬಂದ ಅಣ್ಣಾ 67 ಗಂಟೆಗಳಿಂದ ತಮ್ಮ ~ಮನೆ~ಯಾಗಿದ್ದ ಸೆರೆಮನೆಯ ಹೊರಗೆ ದ್ವಾರಗಳ ಬಳಿ ನಿರ್ಮಿಸಲಾಗಿದ್ದ ಸಣ್ಣ ವೇದಿಕೆಯ ಮೇಲೇರಿದರು.

ಸರ್ಕಾರ ಭೇಷತ್ತಾಗಿ ಬಿಡುಗಡೆ ಮಾಡಿದ್ದರೂ ಮಂಗಳವಾರ ಸೆರೆಮನೆಯಿಂದ ಹೊರಬರಲು ಹಿರಿಯ ಹೋರಾಟಗಾರ ನಿರಾಕರಿಸಿದ್ದರು.

ರಾಷ್ಟ್ರವನ್ನು ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡುವುದೇ ತಮ್ಮ ಹೋರಾಟದ ಗುರಿ ಎಂದು ಅವರು ನುಡಿದರು. ತಿಹಾರ್ ಸೆರೆಮನೆಯಿಂದ ಹೊರಬಂದ ಅವರು ಮಿನಿ ಟ್ರಕ್ ಏರಿ ಮುಗಿಲು ಮುಟ್ಟುವ ಘೋಷಣೆಗಳ ಮಧ್ಯೆ ರಾಮಲೀಲಾ ಸಭಾಂಗಣದತ್ತ ಮೆರವಣಿಗೆಯಲ್ಲಿ ತೆರಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.