ADVERTISEMENT

ಸೇನೆಯ ಆಧುನೀಕರಣಕ್ಕೆ ಹೆಚ್ಚು ಹಣ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಭೂಸೇನಾ ಮುಖ್ಯಸ್ಥ ಜ. ವಿ. ಕೆ. ಸಿಂಗ್ ಅವರು ಸೇನಾ ಯುದ್ಧ ಸಾಮರ್ಥ್ಯದಲ್ಲಿಯ ಕೆಲವು ಲೋಪಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸೇನೆಯ ಆಧುನೀಕರಣಕ್ಕೆ ಅದರಲ್ಲೂ ಬಾಹ್ಯಾಕಾಶ ರಕ್ಷಣೆಯ ಸಾಮರ್ಥ್ಯ ಹೆಚ್ಚಳಕ್ಕೆ ಈ ಬಾರಿ ಹೆಚ್ಚಿನ ಗಮನಹರಿಸಲಾಗಿದೆ.

ಚೀನಾದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇನೆಯನ್ನು ಆಧುನೀಕರಣ ಮಾಡಲಾಗುತ್ತಿದ್ದು, ಪಕ್ಕದ ಪಾಕಿಸ್ತಾನಕ್ಕೆ ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಸೇನೆಗೆ ಹೆಚ್ಚಿನ ಹಣಕಾಸು ಒದಗಿಸಲಾಗಿದೆ.

ಭೂಸೇನೆಯ ಬಾಹ್ಯಾಕಾಶ ರಕ್ಷಣೆ ವಿಭಾಗಕ್ಕೆ ಶೇಕಡಾ 21ರಷ್ಟು ಅಂದರೆ 18, 828 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದ್ದು ಶೇಕಡಾ 17 ಮತ್ತು 15ರಷ್ಟು ಹಣವನ್ನು  ಕ್ರಮವಾಗಿ ಪದಾತಿ ದಳ ಮತ್ತು ಫಿರಂಗಿ ದಳಕ್ಕೆ ಒದಗಿಸಲಾಗಿದೆ.

ಸೇನೆಯ ತಾಂತ್ರಿಕ ವಿಭಾಗವನ್ನು ಆಧುನೀಕರಣಗೊಳಿಸಲು ಸೇನಾ ಬಜೆಟ್‌ನಲ್ಲಿ ಶೇಕಡಾ 14ರಷ್ಟು ಹಣವನ್ನು ಬಳಸಲಾಗುತ್ತದೆ ಎಂದು ಸೇನೆಯ ಉಪ ಮುಖ್ಯಸ್ಥ ಲೆ. ಜ. ಎಸ್. ಕೆ. ಸಿಂಗ್ ಅವರು ಸಂಸದೀಯ ಸ್ಥಾಯಿ ಸಮಿತಿಗೆ ನೀಡಿರುವ ವಿವರಗಳಲ್ಲಿ ತಿಳಿಸಿದ್ದಾರೆ.

ಸೇನೆಯನ್ನು ಮತ್ತಷ್ಟು ಆಧುನೀಕರಣಗೊಳಿಸಲು ಇನ್ನೂ ಹೆಚ್ಚಿನ ಹಣದ ಅಗತ್ಯವಿದೆ ಎಂದು ಅವರು 22 ಪುಟಗಳ ವರದಿಯಲ್ಲಿ ತಿಳಿಸಿದ್ದಾರೆ.ಕಳೆದ ಮಾರ್ಚ್ 12ರಂದು ಸೇನೆಯ ಮುಖ್ಯಸ್ಥ ಸಿಂಗ್ ಅವರು ಪ್ರಧಾನಿ ಅವರಿಗೆ ರಹಸ್ಯ ಪತ್ರ ಬರೆದು ಸೇನೆಯ ಯುದ್ಧ ಸಾಮರ್ಥ್ಯದಲ್ಲಿಯ ಕೆಲವು ಲೋಪದೋಷಗಳ ಬಗ್ಗೆ ಗಮನ ಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.