ನವದೆಹಲಿ (ಪಿಟಿಐ): ಸ್ವಿಟ್ಜರ್ಲೆಂಡ್ ಬ್ಯಾಂಕ್‌ಗಳಲ್ಲಿ ಭಾರತೀಯರು ಹೊಂದಿರುವ ಬ್ಯಾಂಕ್ ಖಾತೆಗಳ ಕುರಿತು ಆ ದೇಶ ಮಾಹಿತಿ ನೀಡುತ್ತಿಲ್ಲ ಎಂದು ದೂರಿರುವ ಹಣಕಾಸು ಸಚಿವ ಪಿ. ಚಿದಂಬರಂ, ಇದೇ ರೀತಿಯ ಅಸಹಕಾರ ಮುಂದುವರೆದಲ್ಲಿ ಜಿ–20ಯಂತಹ ಬಹುರಾಷ್ಟ್ರೀಯ ವೇದಿಕೆಗಳ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂಬಂಧ ಸ್ವಿಟ್ಜರ್ಲೆಂಡ್ ಹಣಕಾಸು ಸಚಿವೆ ಎವಿಲೆನ್ ವಿಡ್‌ಮಿರ್ ಶ್ಲಂಪ್ ಅವರಿಗೆ ಎರಡು ಪುಟಗಳ ಪತ್ರವೊಂದನ್ನು ಬರೆದಿರುವ ಚಿದಂಬರಂ, 2009ರ ಏಪ್ರಿಲ್‌ನಲ್ಲಿ ನಡೆದ ಜಿ–20 ರಾಷ್ಟ್ರಗಳ ನಾಯಕರ ಸಭೆಯಲ್ಲಿ ಕೈಗೊಂಡ ‘ಬ್ಯಾಂಕ್ ರಹಸ್ಯತೆಯ ಯುಗ ಕೊನೆಗೊಂಡಿದೆ’ ಎನ್ನುವ ಘೋಷಣೆಯನ್ನು ನೆನಪಿಸಿದ್ದಾರೆ.
ಭವಿಷ್ಯದಲ್ಲಿ ಇದೇ ರೀತಿಯ ಅಸಹಕಾರ ಮುಂದುವರೆದಲ್ಲಿ ಸ್ವಿಟ್ಜರ್ಲೆಂಡ್ ಅನ್ನು ’ಅಸಹಕಾರ ವ್ಯಾಪ್ತಿ’ ಗೆ ಸೇರಿಸಬೇಕಾಗುತ್ತದೆ. ತೆರಿಗೆ ಅಧಿಕಾರಿಗಳಿಗೆ ಅಗತ್ಯವಾದ ಮಾಹಿತಿಯನ್ನು ಸ್ವಿಸ್ ಬ್ಯಾಂಕ್‌ಗಳು ನೀಡುತ್ತಿಲ್ಲ ಎಂದರು.
ಪಾರದರ್ಶಕತೆಯ ಆಧುನಿಕತೆಗೆ ಒಗ್ಗಿಕೊಳ್ಳದ ಸ್ವಿಟ್ಜರ್‌ಲೆಂಡ್ ಈಗಲೂ ಬ್ಯಾಂಕ್ ಖಾತೆಗಳ ರಹಸ್ಯ ಕಾಪಾಡುವುದಕ್ಕೆ ಆದ್ಯತೆ ನೀಡಿದೆ ಎಂದು ಮಾ. 13ರಂದು ಬರೆದ ಪತ್ರದಲ್ಲಿ ಟೀಕಿಸಲಾಗಿದೆ.
ಜಿ–20 ರಾಷ್ಟ್ರಗಳ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದಂತೆ, ಬ್ಯಾಂಕ್ ಖಾತೆಗಳ ಮಾಹಿತಿ ನೀಡದೆ ಇದ್ದರೆ ಅಂತಹ ರಾಷ್ಟ್ರದ ಮೇಲೆ ಹಲವು ನಿರ್ಬಂಧಗಳನ್ನು ಹೇರಬಹುದಾಗಿದೆ. ಪಾರದರ್ಶಕತೆ ಪಾಲಿಸದ ಸ್ವಿಟ್ಜರ್‌ಲೆಂಡ್ ಧೋರಣೆಯನ್ನು ಜಾಗತಿಕ ವೇದಿಕೆಗಳಲ್ಲಿ ಪ್ರಸ್ತಾಪಿಸಲು ಭಾರತ ಹಿಂದೆಮುಂದೆ ನೋಡುವುದಿಲ್ಲ ಎಂದೂ ಪತ್ರದಲ್ಲಿ ಎಚ್ಚರಿಸಲಾಗಿದೆ.
ಶೀಘ್ರ ಪ್ರತಿಕ್ರಿಯೆ: ಚಿದಂಬರಂ ಪತ್ರಕ್ಕೆ ಶೀಘ್ರ ಪ್ರತಿಕ್ರಿಯೆ ನೀಡುವುದಾಗಿ ಸ್ವಿಟ್ಜರ್ಲೆಂಡ್‌್ ಸರ್ಕಾರದ ವಕ್ತಾರರೊಬ್ಬರು ಗುರುವಾರ ಸಂಜೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.