ADVERTISEMENT

ಹಕ್ಕುಚ್ಯುತಿ ನೋಟಿಸ್: ಈಗ ಪ್ರಶಾಂತ್, ಕೇಜ್ರಿವಾಲ್ ಸರದಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 19:30 IST
Last Updated 3 ಸೆಪ್ಟೆಂಬರ್ 2011, 19:30 IST

ನವದೆಹಲಿ, (ಪಿಟಿಐ/ಐಎಎನ್‌ಎಸ್): ಸಂಸದರ ವಿರುದ್ಧ ಮಾನಹಾನಿಕರ ಪದಗಳನ್ನು ಬಳಸಿದ ಆರೋಪದ ಮೇಲೆ ಖ್ಯಾತ ನ್ಯಾಯವಾದಿ ಪ್ರಶಾಂತ್ ಭೂಷಣ್ ಹಾಗೂ ಅರವಿಂದ್ ಕೇಜ್ರಿವಾಲ್ ಅವರಿಗೆ ಶನಿವಾರ ಸಂಸತ್ತಿನಿಂದ ಹಕ್ಕುಚ್ಯುತಿ ನೋಟಿಸ್ ನೀಡಲಾಗಿದೆ.

ಇದರಿಂದ ಅಣ್ಣಾ ಹಜಾರೆ ತಂಡದ ಮೂವರು ಸದಸ್ಯರು ಇಂತಹ ನೋಟಿಸ್ ಪಡೆದಂತಾಗಿದೆ. ಇದೇ 14ರೊಳಗೆ ಉತ್ತರಿಸಲು ಅವರಿಗೆ ಸೂಚಿಸಲಾಗಿದೆ.

`ನೋಟಿಸ್ ನೀಡಿರುವ ಕ್ರಮ ನ್ಯಾಯಸಮ್ಮತವಲ್ಲ. ಸಾರ್ವಜನಿಕರ ಎದುರು ಸತ್ಯ ಮಾತನಾಡುವುದು ಹಕ್ಕುಚ್ಯುತಿ ಆಗುವುದಿಲ್ಲ. ಸಾರ್ವಜನಿಕ ಹಿತಾಸಕ್ತಿಗಾಗಿ ನಿಜ ಹೇಳುವುದು ಹಕ್ಕುಚ್ಯುತಿ ಆಗುವುದಾದರೆ ಸಂಸತ್ತಿನ ಹಕ್ಕುಚ್ಯುತಿ ನಿಯಮವನ್ನು ಸಂಪೂರ್ಣವಾಗಿ ಪರಾಮರ್ಶಿಸುವ ಕಾಲ ಬಂದಿದೆ ಎಂದೇ ತಿಳಿಯಬೇಕು~ ಎಂದು ಪ್ರಶಾಂತ್ ಹೇಳಿದ್ದಾರೆ. ಪ್ರತಿಕ್ರಿಯೆ ಪಡೆಯಲು ಕೇಜ್ರಿವಾಲ್ ಮಾಧ್ಯಮಗಳ ಸಂಪರ್ಕಕ್ಕೆ ಸಿಕ್ಕಿಲ್ಲ. ಸಂಸದರ ವಿರುದ್ಧ ಮಾನಹಾನಿಕರ ಪದ ಬಳಸಿದ ಆರೋಪಕ್ಕಾಗಿ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರಿಗೂ ಇತ್ತೀಚೆಗೆ ಹಕ್ಕುಚ್ಯುತಿ ನೋಟಿಸ್ ನೀಡಲಾಗಿದೆ. ನೋಟಿಸ್‌ಗೆ ಸೂಕ್ತ ರೀತಿಯಲ್ಲಿ ಉತ್ತರಿಸುವುದಾಗಿ ಬೇಡಿ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

`ನಾನು ರಾಜಕಾರಣಿಗಳ ವಿರುದ್ಧ ನೀಡಿರುವ ಹೇಳಿಕೆಯ ಬಗ್ಗೆ ಕ್ಷಮೆ ಕೇಳುವುದಿಲ್ಲ, ಬದಲಿಗೆ ಸದನದಲ್ಲಿ ಸದಸ್ಯರ ವರ್ತನೆಯ ಬಗ್ಗೆ ಹೆಚ್ಚಿನ ವಿವರ ನೀಡುವ ಮೂಲಕ ಸತ್ಯವನ್ನು ಬಯಲು ಮಾಡುತ್ತೇನೆ~ ಎಂದಿದ್ದಾರೆ.

ತಾವು ಮಾತನಾಡಿದ ಸಂದರ್ಭದಲ್ಲಿ ಸತ್ಯವನ್ನು ಹೇಳಲೇಬೇಕಾಗಿತ್ತು, ಅದನ್ನು ಬಿಟ್ಟು ಬೇರೆ ಮಾರ್ಗವಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.