ADVERTISEMENT

ಹತ್ತು ವರ್ಷ ಗಣಿಗಾರಿಕೆ ನಿಷೇಧಕ್ಕೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST

ನವದೆಹಲಿ: ಅಕ್ರಮ ಗಣಿಗಾರಿಕೆ ನಡೆದಿರುವ ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹತ್ತು ವರ್ಷಗಳ ಕಾಲ ಗಣಿಗಾರಿಕೆ ನಿಷೇಧಿಸಬೇಕು ಎಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ಉನ್ನತಾಧಿಕಾರ ಸಮಿತಿ (ಸಿಇಸಿ) ಕೋರ್ಟ್‌ಗೆ ಶಿಫಾರಸು ಮಾಡಿದೆ.

ಸಮಿತಿ ಬುಧವಾರ ಪೂರಕ ವರದಿಯನ್ನು ಸಲ್ಲಿಸಿತು. ಗಣಿ ಕಂಪೆನಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು, ಭಾರತೀಯ ಅರಣ್ಯ ಪರಿಷತ್‌ನ ಸಂಶೋಧನೆ ಮತ್ತು ಅರಿವು ಸಂಸ್ಥೆಯ ತಜ್ಞರು ಈ ಪ್ರದೇಶದಲ್ಲಿ ಸುಧಾರಣೆ ಮತ್ತು ಪುನರ್ವಸತಿ ಕಲ್ಪಿಸುವುದು ಅಗತ್ಯ ಎನ್ನುವ ಸರ್ವಾನುಮತಕ್ಕೆ ಬಂದಿರುವ ಅಂಶವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿಯ ಪ್ರಮುಖ ಅಂಶ: ಅಕ್ರಮ ಗಣಿಗಾರಿಕೆ ನಡೆದಿರುವ ಪ್ರದೇಶದಲ್ಲಿ ನೈಸರ್ಗಿಕ ಸಂಪತ್ತು ಹಾಗೂ ಪ್ರಕೃತಿ ಹಾನಿಗೆ ಒಳಗಾಗಿದ್ದು, ಈ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲು ಕನಿಷ್ಠ ಹತ್ತು ವರ್ಷಗಳು ಬೇಕಾಗುತ್ತದೆ. ಅಲ್ಲಿಯವರೆಗೆ ಗಣಿಗಾರಿಕೆ ನಿಷೇಧಿಸಬೇಕು.

ಬಳ್ಳಾರಿ ಜಿಲ್ಲೆಯಲ್ಲಿ ವರ್ಷಕ್ಕೆ 25 ದಶಲಕ್ಷ ಟನ್, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 5 ದಶಲಕ್ಷ ಟನ್ ಕಬ್ಬಿಣದ ಅದಿರು ತೆಗೆಯಲು ಮಿತಿ ಹೇರಬೇಕು.

ಕಬ್ಬಿಣದ ಅದಿರನ್ನು ಇ-ಹರಾಜಿನ ಮೂಲಕವೇ ವಿಲೇವಾರಿ ಮಾಡಬೇಕು. ಈ ಪ್ರಕ್ರಿಯೆ ಸುಪ್ರೀಂ ಕೋರ್ಟ್ ನೇಮಿಸಿರುವ ಮೇಲ್ವಿಚಾರಣೆ ಸಮಿತಿಯ ಉಸ್ತುವಾರಿಯಲ್ಲಿ ನಡೆಯಬೇಕು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.