ADVERTISEMENT

ಹೇಳಿಕೆ ಬದಲಿಸಿದ ಮೊಂಟೆಕ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST
ಹೇಳಿಕೆ ಬದಲಿಸಿದ ಮೊಂಟೆಕ್
ಹೇಳಿಕೆ ಬದಲಿಸಿದ ಮೊಂಟೆಕ್   

ನವದೆಹಲಿ (ಪಿಟಿಐ): ದಿನವೊಂದಕ್ಕೆ 32 ರೂಪಾಯಿ ವ್ಯಯ ಮಾಡಿ ಜೀವನ ನಡೆಸುವವರು ಬಡತನ ರೇಖೆಯ (ಬಿಪಿಎಲ್)ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟಿನಲ್ಲಿ ಪ್ರಮಾಣ ಪತ್ರ ಸಲ್ಲಿಸಿದ್ದ ಯೋಜನಾ ಆಯೋಗ, ಈಗ ತನ್ನ ಹೇಳಿಕೆಯನ್ನ ಅಲ್ಪ ಬದಲಾವಣೆ ಮಾಡಿದೆ.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಅವರೊಂದಿಗೆ ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, `ಬಡತನ ಗುರುತಿಸಲು ಇದು ಮಾನದಂಡವಲ್ಲ. ಸುಪ್ರೀಂ ಕೋರ್ಟಿಗೆ ನೀಡಿರುವ ಪ್ರಮಾಣ ಪತ್ರದಲ್ಲಿರುವ ಅಂಶಗಳು ಆಯೋಗದ ಸಮಗ್ರ ದೃಷ್ಟಿಕೋನದಿಂದ ಕೂಡಿಲ್ಲ. ಜತೆಗೆ ಬಿಪಿಎಲ್ ಕುಟುಂಬಗಳಿಗೆ ಸವಲತ್ತು ನೀಡಲು ಈ ಅಂಕಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ~ ಎಂದು ವ್ಯತಿರಿಕ್ತ ಹೇಳಿಕೆ ನೀಡಿದರು.

32 ರೂಪಾಯಿ ಮಾನದಂಡದ ಮೂಲಕ ದೇಶದಲ್ಲಿರುವ ಬಡತನ ಇಲ್ಲ ಎಂದು ತೋರಿಸಲು ಯೋಜನಾ ಆಯೋಗ ಯತ್ನಿಸುತ್ತಿದೆ ಎಂದು ಸಾರ್ವಜನಿಕರು ಭಾವಿಸಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ನಗರ ಪ್ರದೇಶದಲ್ಲಿ 32 ರೂಪಾಯಿಗಿಂತ ಕಡಿಮೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ದಿನವೊಂದಕ್ಕೆ 26 ರೂಪಾಯಿಗಳಿಗಿಂತ ಕಡಿಮೆ ವೆಚ್ಚದಲ್ಲಿ ಜೀವನ ನಿರ್ವಹಣೆ ಮಾಡುವ ವ್ಯಕ್ತಿಗಳನ್ನು ಬಿಪಿಎಲ್ ಎಂದು ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟಿನಲ್ಲಿ ಯೋಜನಾ ಆಯೋಗ ಪ್ರಮಾಣ ಪತ್ರ ಸಲ್ಲಿಸಿದ್ದು, ಇದು ರಾಷ್ಟ್ರೀಯ ಸಲಹಾ ಮಂಡಳಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು.

ಯೋಜನಾ ಆಯೋಗದ ಪ್ರಮಾಣ ಪತ್ರದ ಪ್ರಕಾರ, 2011 ಜೂನ್‌ನ ಬೆಲೆಗಳನ್ನು ಆಧರಿಸಿ, ಐದು ಸದಸ್ಯರ ಕುಟುಂಬ ನಗರ ಪ್ರದೇಶದಲ್ಲಿ 4,824 ರೂಪಾಯಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ 3,905 ರೂಪಾಯಿ ಪ್ರತಿ ತಿಂಗಳು ಜೀವನ ನಿರ್ವಹಣೆಗೆ ವ್ಯಯ ಮಾಡಿದರೆ ಅಂತಹ ಕುಟುಂಬ ಬಿಪಿಎಲ್ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದಿತ್ತು.

ಬಡತನ ರೇಖೆ ಗುರುತಿಸುವಲ್ಲಿ ಯೋಜನಾ ಆಯೋಗದ ಮಾನದಂಡದ ಬಗ್ಗೆ ವ್ಯಕ್ತವಾದ ತೀವ್ರ ವಿರೋಧ ಹಾಗೂ ಟೀಕೆಗಳಿಗೆ ಸ್ಪಷ್ಟನೆ ನೀಡಲು ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಭಾನುವಾರ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು.

`ನ್ಯಾಯಾಲಯ ಪ್ರಕರಣವೊಂದಕ್ಕೆ ಸಂಬಂಧಿಸಿದ ಪ್ರಶ್ನೆಗೆ ನೀಡಿದ ಉತ್ತರ ಸರಿಯಾಗಿದೆ. ನಮ್ಮ ವಕೀಲರು ನಮ್ಮ ನಿಲುವನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ಆದರೂ ಸಹ ನ್ಯಾಯಾಲಯ ನೀಡುವ ಆದೇಶಕ್ಕೆ ಬದ್ಧವಾಗಿದ್ದೇವೆ~ ಎಂದು ಅಹ್ಲುವಾಲಿಯಾ ತಿಳಿಸಿದರು.ಬಡತನ ರೇಖೆ ನಿಗದಿಗೆ ಆಯೋಗ ಮಾಡಿರುವ ಮಾನದಂಡದ ಕುರಿತು ಟೀಕೆ ಮಾಡುವ ಮೂಲಕ ಆಯೋಗಕ್ಕೆ ಇರಿಸುಮುರಿಸು ಉಂಟು ಮಾಡಲಾಗಿದೆ.

ಬಿಪಿಎಲ್ ಕುಟುಂಬಕ್ಕೆ ಸವಲತ್ತು ವಿಸ್ತರಿಸಲು ಇದು ಮಾನದಂಡವಲ್ಲ ಎಂದು ಸ್ಪಷ್ಟಪಡಿಸಿದರು.
ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಯೋಜನಾ ಆಯೋಗ ಜಂಟಿಯಾಗಿ ತಜ್ಞರ ಸಮಿತಿಯನ್ನು ರಚನೆ ಮಾಡಲಿದ್ದು, ಈ ಸಮಿತಿ ಬಿಪಿಎಲ್ ಕುಟುಂಬ ಗುರುತಿಸಲು ಸಾಮಾಜಿಕ- ಆರ್ಥಿಕ, ಜಾತಿ ಗಣತಿ ಕಾರ್ಯ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.