ADVERTISEMENT

ಹೊಸ ತತ್ಕಾಲ್ ಜಾರಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 19:30 IST
Last Updated 10 ಜುಲೈ 2012, 19:30 IST

ನವದೆಹಲಿ (ಪಿಟಿಐ): ದುರ್ಬಳಕೆ ತಡೆಯಲು ರೈಲ್ವೆ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ತತ್ಕಾಲ್ ಯೋಜನೆ ಪರಿಷ್ಕರಿಸಲಾಗಿದ್ದು, ಮಂಗಳವಾರದಿಂದ ಜಾರಿಯಾಗಿದೆ. ನೂತನ ಯೋಜನೆ ಅಡಿಯಲ್ಲಿ ಪ್ರಯಾಣಿಕರು ಬೆಳಿಗ್ಗೆ 8 ಗಂಟೆ ಬದಲಿಗೆ 10ಗಂಟೆಯಿಂದ  ಟಿಕೆಟ್ ಕಾಯ್ದಿರಿಸಬಹುದು.

ಈ ಯೋಜನೆ ದುರ್ಬಳಕೆ ಬಗ್ಗೆ ಪ್ರಯಾಣಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಇಲಾಖೆ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಂಡಿದೆ.ಪರಿಷ್ಕೃತ ಯೋಜನೆ ಪ್ರಕಾರ, ಐಆರ್‌ಸಿಟಿಸಿ ಸೇರಿದಂತೆ ಅಧಿಕೃತ ಏಜೆಂಟರಿಗೆ ಕೌಂಟರ್‌ನಿಂದ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ತತ್ಕಾಲ್ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ಅವಕಾಶಇಲ್ಲ. ಕೆಲವೊಂದು ರೈಲ್ವೆ ವಲಯಗಳು ಪ್ರತ್ಯೇಕವಾಗಿ ತತ್ಕಾಲ್ ಕೌಂಟರ್ ನಿರ್ವಹಿಸಲಿವೆ

ಇದಕ್ಕಾಗಿ ಮುಂಗಡ ಕಾಯ್ದಿರಿಸುವಿಕೆ ಕೌಂಟರ್‌ಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಗಡ ಕಾಯ್ದಿರಿಸುವಿಕೆಯ ಪ್ರಮುಖ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ, ಕೌಂಟರ್ ಒಳಗೆ ಸಿಬ್ಬಂದಿಗೆ ಮೊಬೈಲ್ ಫೋನ್ ಬಳಕೆ ನಿರ್ಬಂಧ, ದೂರುಗಳಿಗೆ ಸಹಾಯವಾಣಿ ಸಂಖ್ಯೆ ನಮೂದಿಸುವುದು, ತತ್ಕಾಲ್ ಸೌಲಭ್ಯ ದುರ್ಬಳಕೆ ತಡೆಗೆ ಜಾಗೃತ ದಳ ಸಿಬ್ಬಂದಿ ಕಾರ್ಯಾಚರಣೆ  ಇತ್ಯಾದಿ ಕ್ರಮಗಳನ್ನು ಪರಿಷ್ಕೃತ ಯೋಜನೆಯಲ್ಲಿ ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.