ADVERTISEMENT

ಹ್ಯಾಟ್ರಿಕ್ ವೀರರ ಸಾಲಿನಲ್ಲಿ...

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಈಗ ಹ್ಯಾಟ್ರಿಕ್ ಸಾಧಿಸಿದ ಇತರ ಆರು ಮುಖ್ಯಮಂತ್ರಿಗಳ ಸಾಲಿಗೆ ಸೇರಿದ್ದಾರೆ.
1954ರಿಂದ 1971ರವರೆಗೆ ರಾಜಸ್ತಾನದ ಮುಖ್ಯಮಂತ್ರಿಯಾಗಿದ್ದ ಮೋಹನ್ ಲಾಲ್ ಸುಖಾಡಿಯಾ ಮೂರು ಬಾರಿ ಸತತ ಆಯ್ಕೆಯಾಗಿ ಹ್ಯಾಟ್ರಿಕ್ ವೀರ ಎನಿಸಿಕೊಂಡಿದ್ದರು. 38ರ ಎಳೆಯ ವಯಸ್ಸಿನಲ್ಲೇ ಮುಖ್ಯಮಂತ್ರಿಯಾಗಿದ್ದ ಅವರು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ರಾಜ್ಯಪಾಲರೂ ಆಗಿದ್ದರು.

ಆನಂತರ ಈ ಗೌರವಕ್ಕೆ ಪಾತ್ರರಾದವರು ಜ್ಯೋತಿ ಬಸು. ಅವರು 1977ರಿಂದ 2000ದವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದರು. ರಾಜ್ಯವೊಂದರಲ್ಲಿ ಅತಿ ದೀರ್ಘಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದ ಬಸು ಸತತ ಐದು ಬಾರಿ ಮುಖ್ಯಮಂತ್ರಿಯಾಗಿದ್ದರು.

1996ರಲ್ಲಿ ಪ್ರಧಾನಿ ಪಟ್ಟದ ಸಮೀಪಕ್ಕೆ ಬಂದಿದ್ದ ಅವರು, ತಮ್ಮ ಪಕ್ಷ ಆ ನಿರ್ಧಾರ ಬೆಂಬಲಿಸದ ಕಾರಣ ಹಿಂದಕ್ಕೆ ಸರಿದರು. ಪ್ರಧಾನಿಯಾಗುವ ಅವಕಾಶ ಕರ್ನಾಟಕದ ಎಚ್.ಡಿ. ದೇವೇಗೌಡ ಅವರ ಪಾಲಾಯಿತು. ದೆಹಲಿ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಹಾಗೂ ತ್ರಿಪುರದ ಮುಖ್ಯಮಂತ್ರಿಯಾಗಿರುವ ಮಾರ್ಕ್ಸ್‌ವಾದಿ ನಾಯಕ ಮಾಣಿಕ್ ಸರ್ಕಾರ್ ಸಹ ಮೂರು ಸಲ ಸತತವಾಗಿ ಜಯ ಗಳಿಸಿದ್ದಾರೆ. 1998ರಿಂದ ಅಧಿಕಾರದಲ್ಲಿದ್ದಾರೆ. ಮುಂದಿನ ವರ್ಷದ ಅಂತ್ಯದಲ್ಲಿ ಈ ಇಬ್ಬರೂ ನಾಲ್ಕನೆಯ ಬಾರಿ ಚುನಾವಣೆ ಎದುರಿಸಲಿದ್ದಾರೆ.

ಸತತ ಮೂರು ಬಾರಿ ಗೆಲುವು ಸಾಧಿಸಿರುವ ಒಡಿಶಾ ಮುಖ್ಯಮಂತ್ರಿ ಬಿಜು ಜನತಾದಳದ ನವೀನ್ ಪಟ್ನಾಯಕ್ 2000ನೇ ಇಸ್ವಿಯಿಂದ ಅಧಿಕಾರದಲ್ಲಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಕಾಂಗ್ರೆಸ್‌ನ ತರುಣ್ ಗೊಗೊಯ್ ಸಹ 2001ರಿಂದ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.