ನವದೆಹಲಿ(ಐಎಎನ್ಎಸ್): ಜಗತ್ತಿನಾದ್ಯಂತ ಪ್ರತಿವರ್ಷ ಸುಮಾರು 50ರಿಂದ 60 ಲಕ್ಷ ಜನರ ಸಾವಿಗೆ ತಂಬಾಕು ಸೇವನೆಯೇ ಪ್ರಮುಖ ಕಾರಣ. ಇವೆಲ್ಲ ತಡೆಗಟ್ಟಬಹುದಾದ ಸಾವಿನ ಪ್ರಕರಣಗಳು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ಕಳೆದ ಶತಮಾನದಲ್ಲಿ ತಂಬಾಕು ಸೇವನೆಯಿಂದ ಸುಮಾರು 10 ಕೋಟಿ ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಇದು ಹೀಗೇ ಮುಂದುವರಿದರೆ 21ನೇ ಶತಮಾನದಲ್ಲಿ ತಂಬಾಕು ಸೇವನೆಯಿಂದ ಸಾಯುವವರ ಸಂಖ್ಯೆ 100 ಕೋಟಿಗೆ ತಲುಪಬಹುದು’ ಎಂದು ಕ್ಲೀಯರ್ ಮೆಡಿ ಹೆಲ್ತ್ಕೇರ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಶಶಿಕಾಂತ್ ಬಲಿಯಾನ್ ಹೇಳಿದ್ದಾರೆ.
ನೇರ ಧೂಮಪಾನ ಸೇವನೆಯಿಂದ ಪ್ರತಿವರ್ಷ 50 ಲಕ್ಷ ಜನರು ಸಾಯುತ್ತಾರೆ. ಆರು ಲಕ್ಷ ಜನರು ಪರೋಕ್ಷ ಧೂಮಪಾನದಿಂದ ಸಾಯುತ್ತಿದ್ದಾರೆ. ಇವರಲ್ಲಿ ಅನೇಕರು ಅಪ್ರಾಪ್ತ ವಯಸ್ಕರಾಗಿರುತ್ತಾರೆ’ ಎಂದು ಬಲಿಯಾನ್ ವಿವರಿಸಿದ್ದಾರೆ.
ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ಹೃದ್ರೋಗ ತಜ್ಞರಾದ ರಜನೀಶ್ ಅವರ ಪ್ರಕಾರ ತಂಬಾಕು ಸೇವನೆ ಇದೇ ರೀತಿ ಮುಂದುವರಿದದ್ದೇ ಆದರೆ 2030ರ ಹೊತ್ತಿಗೆ ಸುಮಾರು 80 ಲಕ್ಷ ಜನರು ತಂಬಾಕಿನ ದುಶ್ಚಟಕ್ಕೆ ಜೀವ ತೆರಬೇಕಾಗಬಹುದು.
‘ನಮ್ಮ ಆಸ್ಪತ್ರೆಯ ಕ್ಯಾನ್ಸರ್ ರೋಗಿಗಳನ್ನು ಸಂದರ್ಶಿಸಿದಾಗ ಕತ್ತು, ತಲೆ, ಮತ್ತು ಗಂಟಲ ಕ್ಯಾನ್ಸರ್ನಿಂದ ಬಳಲುತ್ತಿರುವ ಶೇ 80ರಿಂದ 90 ರೋಗಿಗಳು ತಂಬಾಕು ಸೇವನೆಯಿಂದ ರೋಗಕ್ಕೆ ತುತ್ತಾದವರಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಭಾರತದಲ್ಲಿ ಪ್ರತಿವರ್ಷ 10 ಲಕ್ಷಕ್ಕೂ ಅಧಿಕ ಜನರು ತಂಬಾಕು ಸಂಬಂಧೀ ರೋಗದಿಂದ ಅಕಾಲಿಕವಾಗಿ ಮರಣ ಹೊಂದುತ್ತಿದ್ದಾರೆ’ ಎಂದು ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಪಂಕಜ್ ಚತುರ್ವೇದಿ ಹೇಳಿದ್ದಾರೆ.
ತಂಬಾಕು ಸೇವನೆಯಿಂದ ಪುಪ್ಪುಸ ಕ್ಯಾನ್ಸರ್‌ಗೆ ತುತ್ತಾದವರಲ್ಲಿ ಶೇ 10ರಷ್ಟು ರೋಗಿಗಳು ಯುವಕರಾಗಿದ್ದಾರೆ. 2020ರ ಹೊತ್ತಿಗೆ ಪ್ರತಿ 10 ಪುಪ್ಪುಸ ಕ್ಯಾನ್ಸರ್ ರೋಗಿಗಳಲ್ಲಿ 5 ಜನರು ತಂಬಾಕು ಸೇವನೆಯಿಂದ ರೋಗಕ್ಕೆ ತುತ್ತಾದವರಾಗಿರುತ್ತಾರೆ ಎಂದು ನೀರಜ್ ಗುಪ್ತಾ ಹೇಳುತ್ತಾರೆ.
ಮಹಿಳೆಯರ ಸಂಖ್ಯೆ ಹೆಚ್ಚಿದೆಯೇ?: ’ಹೌದು’ ಎನ್ನುತ್ತಾರೆ ತಜ್ಞರು.
ಕಳೆದ ಎರಡು ದಶಕದಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸುವ ಮಹಿಳೆಯರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆಯಂತೆ.
‘ಒತ್ತಡ, ನಗರೀಕರಣ ಮತ್ತು ಆಧುನೀಕರಣದ ಪರಿಣಾಮವಾಗಿ ಮಹಿಳೆಯರು ಕೂಡ ವ್ಯಾಪಕವಾಗಿ ತಂಬಾಕು ಉತ್ಪನ್ನಗಳ ಸೇವನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಹಿಂದೆ ಸಾಮಾಜಿಕ ಕಟ್ಟಳೆಯ ಕಾರಣದಿಂದ ಮಹಿಳೆ ತಂಬಾಕು ಸೇವನೆಯಿಂದ ದೂರವಿದ್ದಳು. ಇಂದು ಪ್ರತಿ 10 ಮಹಿಳೆಯರಲ್ಲಿ ಮೂವರು ನೇರ ಅಥವಾ ಪರೋಕ್ಷ ಧೂಮಪಾನ ಸೇವನೆ-ಯಲ್ಲಿ ತೊಡಗಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.
ತಂಬಾಕು ಸೇವನೆಯಿಂದ ರೋಗಕ್ಕೆ ತುತ್ತಾಗುವ ಸಾಧ್ಯತೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಎಂದೂ ತಜ್ಞರು ಒಪ್ಪಿಕೊಳ್ಳುತ್ತಾರೆ. ‘ಅವರ ದೇಹ ಮತ್ತು ಜೈವಿಕ ಕ್ರಿಯೆಗಳು ತುಂಬ ದುರ್ಬಲವಾಗಿರುತ್ತದೆ. ಯಾವುದೇ ರೀತಿಯ ಅಸಹಜತೆ ಅವರ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಈ ವಾಸ್ತವವನ್ನು ಮಹಿಳೆಯರು ಒಪ್ಪಿಕೊಳ್ಳಬೇಕು’ ಎಂದು ಕ್ಯಾನ್ಸರ್ ತಜ್ಞ ಜೈನ್ ಹೇಳುತ್ತಾರೆ.
ಧೂಮಪಾನ ಗರ್ಭದಲ್ಲಿನ ಶಿಶುಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಅವಧಿಗೂ ಮುನ್ನ ಹೆರಿಗೆಯಾಗುವ ಸಂಭವವೂ ಹೆಚ್ಚಾಗಿರುತ್ತದೆ. ಆದ್ದರಿಂದ ಗರ್ಭಿಣಿ ಸ್ತ್ರೀಯರು ಧೂಮಪಾನ ಮಾಡುವುದು ಅತ್ಯಂತ ಹಾನಿಕರ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.
ಫಲವಂತಿಕೆ ಕುಂಠಿತ
ಧೂಮಪಾನ 4,000 ರಾಸಾಯನಿಕ ಪದಾರ್ಥಗಳನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ 69 ನೇರವಾಗಿ ಕ್ಯಾನ್ಸರ್ ಜನಕ ರಾಸಾಯನಿಕಗಳಾಗಿವೆ. ಧೂಮಪಾನದಿಂದ ಗರ್ಭಧಾರಣೆಗೆ ಅಡ್ಡಯಾಗುತ್ತದೆ. ಗಂಡಾಗಲಿ ಹೆಣ್ಣಾಗಲಿ ಧೂಮಪಾನದಿಂದ ಫಲವಂತಿಕೆ ಕುಂಠಿತವಾಗುತ್ತದೆ. ಗಂಡಸರಲ್ಲಿ ಧೂಮಪಾನದಿಂದ ವೀರ್ಯಾಣುಗಳ ಪ್ರಮಾಣ ಕಡೆಮೆಯಾಗುತ್ತದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ’ ಎಂದು ಗುಡಗಾಂವ್ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಸಲಹೆಗಾರ ಕೈಲಾಶ್ ನಾಥ್ ಗುಪ್ತಾ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.