ADVERTISEMENT

‘40 ಭಾರತೀಯರು ಸಂಪರ್ಕಕ್ಕೆ ಸಿಕ್ಕಿಲ್ಲ’

​ಪ್ರಜಾವಾಣಿ ವಾರ್ತೆ
Published 18 ಜೂನ್ 2014, 9:35 IST
Last Updated 18 ಜೂನ್ 2014, 9:35 IST

ನವದೆಹಲಿ (ಪಿಟಿಐ): ಉಗ್ರರ ಕ್ಷಿಪ್ರ ದಾಳಿಗೆ ಒಳಗಾಗಿರುವ ಇರಾಕ್‌ನ ಮೊಸುಲ್‌ ಪಟ್ಟಣದಲ್ಲಿ 40 ಭಾರತೀಯರು ‘ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ. ಅಲ್ಲದೇ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಇರಾಕ್‌ನಲ್ಲಿದ್ದ ಭಾರತದ  ಮಾಜಿ ರಾಯಭಾರಿ ಸುರೇಶ್‌ ರೆಡ್ಡಿ ಅವರನ್ನು ಬಾಗ್ದಾದ್‌ಗೆ ಕಳುಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

‘ಮೊಸುಲ್‌ನಲ್ಲಿರುವ 40 ಭಾರತೀಯರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ನಮ್ಮ ಸಕಲ ಪ್ರಯತ್ನಗಳ ಹೊರತಾಗಿಯೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸಯ್ಯದ್ ಅಕ್ಬರುದ್ದೀನ್‌ ಬುಧವಾರ ತಿಳಿಸಿದ್ದಾರೆ.

ಅವರನ್ನು ಅಪಹರಿಸಲಾಗಿದೆ ಎಂಬ ವರದಿಗಳ ಬಗೆಗಿನ ಪ್ರಶ್ನೆಗೆ ಅಕ್ಬರುದ್ದೀನ್‌ ಅವರು ‘ನಾವು ಅದನ್ನು ಖಚಿತಪಡಿಸಲಾಗದು. ಆದರೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಹಿಂಸಾಚಾರದಲ್ಲಿ ಭಾರತೀಯ ಪ್ರಜೆಗಳನ್ನು ಗುರಿಯಾಗಿಸಿಲ್ಲ. ಅವರು ಕೇವಲ ದಾಳಿ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಭಾರತೀಯ ಪ್ರಜೆಗಳು  ಹಿಂಸಾಚಾರದಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ  ಈ ಹಂತದಲ್ಲಿ ನಮಗೆ ಯಾವುದೇ ಮಾಹಿತಿ ಅಥವಾ ಖಚಿತತೆ ಇಲ್ಲ’ ಎಂದರು.

ADVERTISEMENT

ಇದೇ ವೇಳೆ, ‘ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಭಾರತೀಯರ ನೆರವಿಗೆ ಯತ್ನಿಸುತ್ತಿರುವ ಭಾರತೀಯ ನಿಯೋಗವನ್ನು ಮತ್ತಷ್ಟು ಬಲಪಡಿಸಲು ಮಾಜಿ ರಾಯಭಾರಿ ಸುರೇಶ್‌ ರೆಡ್ಡಿ ಅವರನ್ನು ಬಾಗ್ದಾದ್‌ಗೆ ಕಳುಹಿಸಲು ನಿರ್ಧರಿಸಲಾಗಿದೆ. ಅವರು ಇಂದು (ಬುಧವಾರ) ಪ್ರಯಾಣ ಬೆಳೆಸಲಿದ್ದಾರೆ’ ಎಂದು ನುಡಿದರು.

ಭಾರತ ರಾಯಭಾರಿ ಕಚೇರಿಯ ಮನವಿ ಮೇರೆಗೆ ಟಿಕ್ರಿತ್‌ನಲ್ಲಿ ಸಿಲುಕಿದ್ದ  46 ಭಾರತೀಯ ದಾದಿಯರನ್ನು  ಅಂತರರಾಷ್ಟ್ರೀಯ ರೆಡ್‌ ಕ್ರೆಸೆಂಟ್‌ ಸಂಪರ್ಕಿಸಿ ಅವರಿಗೆ ನೆರವು ನೀಡಿತ್ತು ಎಂದೂ ಅವರು ಹೇಳಿದ್ದಾರೆ.

ಇರಾಕ್‌ನಲ್ಲಿ ಕಳೆದೊಂದು ವಾರದಿಂದ ಹಿಂಸಾಚಾರದಲ್ಲಿ ತೊಡಗಿರುವ ಉಗ್ರರು, ಮೊಸುಲ್‌ ಹಾಗೂ ಟಿಕ್ರಿತ್‌ ನಗರಗಳನ್ನು ವಶ ಪಡಿಸಿಕೊಂಡಿದ್ದಾರೆ.

ಇರಾಕ್‌ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಕಳವಳ ಹೆಚ್ಚುತ್ತಿದ್ದು, ಪರಿಸ್ಥಿತಿಯನ್ನು ಭಾರತ ಸರ್ಕಾರ ನಿಕಟವಾಗಿ ಅವಲೋಕಿಸುತ್ತಿದೆ. ಪ್ರತಿ ಗಂಟೆಯ ಆಧಾರದಲ್ಲಿ ಅಲ್ಲಿನ ವರದಿ ಪಡೆಯುತ್ತಿದೆ.

ಹಿಂಸಾ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳೊಂದಿಗೆ ಸಂಪರ್ಕದ ಬಗೆಗಿನ ವರದಿಗಳನ್ನು ಬಾಗ್ದಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ನವದೆಹಲಿಗೆ ವರದಿ ರವಾನಿಸುತ್ತಿದೆ.

ಇರಾಕ್‌ನಲ್ಲಿ ಸುಮಾರು 10 ಸಾವಿರ ಭಾರತೀಯ ಪ್ರಜೆಗಳಿದ್ದಾರೆ ಎಂಬ ಅಂದಾಜಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.