ADVERTISEMENT

ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ, ಆನಂದ್ ಶರ್ಮಾ ವಾಗ್ದಾಳಿ

ಬಿಜೆಪಿಗೆ, ಪ್ರತಿಪಕ್ಷಗಳಿಗೆ ಬೇರೆಬೇರೆ ಕಾನೂನಿದೆಯೇ: ಶರ್ಮಾ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2018, 10:36 IST
Last Updated 19 ಜುಲೈ 2018, 10:36 IST
ರಾಹುಲ್ ಗಾಂಧಿ (ಎಡ ಚಿತ್ರ) ಮತ್ತು ಆನಂದ್ ಶರ್ಮಾ
ರಾಹುಲ್ ಗಾಂಧಿ (ಎಡ ಚಿತ್ರ) ಮತ್ತು ಆನಂದ್ ಶರ್ಮಾ    

ನವದೆಹಲಿ: ದೇಶದಲ್ಲಿ ಬಿಜೆಪಿಗೆ ಒಂದು ಕಾನೂನು ಮತ್ತು ಪ್ರತಿಪಕ್ಷಗಳಿಗೆ ಮತ್ತೊಂದು ಕಾನೂನು ಇದೆಯೇ ಎಂದು ಹಿರಿಯ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಪ್ರಶ್ನಿಸಿದರು.

ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ದೇಶದಿಂದ ಸ್ವಿಸ್ ಬ್ಯಾಂಕ್‌ಗಳಿಗೆ ಹಣ ಕೊಂಡೊಯ್ದು ಠೇವಣಿ ಇಡುವುದು ಹೆಚ್ಚಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸ್ವಿಸ್ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವ ಪ್ರಮಾಣ ಕಳೆದ ಎರಡು ವರ್ಷಗಳಲ್ಲೇ ಹೆಚ್ಚಾಗಿದೆ. ಹಣವನ್ನು ಜನರ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಡಲಾಗುವುದು ಎಂದು ನೀವು ಹಿಂದೆ ಹೇಳಿದ್ದೀರಿ. ಆದರೆ, ಅದರ ಬದಲು ಭಾರತದಿಂದ ಹೊರಹೋಗುವ ಹಣದ ಪ್ರಮಾಣ ಹೆಚ್ಚಾಗುತ್ತಿದೆ’ ಎಂದು ಆರೋಪಿಸಿದರು.

‘ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಗಂಭೀರ ಆರೋಪಗಳನ್ನೆದುರಿಸುತ್ತಿರುವ ನಿಮ್ಮವರಿಗೆ ಒಂದು ಕಾನೂನು ಮತ್ತು ರಾಜಕೀಯ ಸ್ಪರ್ಧಿಗಳಿಗೆ ಮತ್ತೊಂದು ಕಾನೂನು ಇದೆಯೇ’ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಬಿಜೆಪಿಯಿಂದ ಸತ್ಯ ಮುಚ್ಚಿಡುವ ಯತ್ನ: ರಾಹುಲ್ ಗಾಂಧಿ

ಮಾಹಿತಿ ಹಕ್ಕು ಕಾಯ್ದೆಗೆ (ಆರ್‌ಟಿಐ) ತಿದ್ದುಪಡಿ ತರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರೋಧ ವ್ಯಕ್ತಪಡಿಸಿದ್ದಾರೆ.

‘ಪ್ರತಿಯೊಬ್ಬ ಭಾರತೀಯನಿಗೂ ಸತ್ಯವನ್ನು ತಿಳಿಯುವ ಹಕ್ಕಿದೆ. ಸತ್ಯವನ್ನು ಮುಚ್ಚಿಡಬೇಕು ಮತ್ತು ಅಧಿಕಾರದಲ್ಲಿ ಇರುವವರನ್ನು ಯಾರೂ ಪ್ರಶ್ನಿಸಬಾರದು ಎಂದು ಬಿಜೆಪಿ ಭಾವಿಸಿದೆ. ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ಪ್ರಸ್ತಾಪಿಸಲಾಗಿರುವ ಅಂಶಗಳು ಕಾಯ್ದೆಯನ್ನು ನಿರುಪಯುಕ್ತ ಮಾಡಲಿದೆ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ನಾಳೆ ವಿಶ್ವಾಸಮತ: ವಿಪ್‌ ಜಾರಿ ಮಾಡಿದ ಶಿವಸೇನಾ

ಕಾಂಗ್ರೆಸ್‌, ತೆಲುಗುದೇಶಂ, ಎನ್‌ಸಿಪಿ ಸೇರಿದಂತೆ ವಿರೋಧ ಪಕ್ಷಗಳು ಎನ್‌ಡಿಎ ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿಯ ಮೇಲೆ ಲೋಕಸಭೆಯಲ್ಲಿ ಶುಕ್ರವಾರ ಚರ್ಚೆ ನಡೆಯಲಿದೆ. ಅವಿಶ್ವಾಸ ಗೊತ್ತುವಳಿ ಸಂದರ್ಭ ಬಿಜೆಪಿ ಪರ ಮತ ಚಲಾಯಿಸುವಂತೆ ಶಿವಸೇನಾ ತನ್ನ ಸಂಸದರಿಗೆ ವಿಪ್ ಜಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT