ADVERTISEMENT

ಶ್ರೀಲಂಕಾ ನೌಕಾಪಡೆಯಿಂದ ಮೀನುಗಾರರ ದೋಣಿಗಳಿಗೆ ಹಾನಿ

ಪಿಟಿಐ
Published 4 ಜುಲೈ 2021, 11:38 IST
Last Updated 4 ಜುಲೈ 2021, 11:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮೇಶ್ವರಂ: ಪಾಕ್ ಜಲಸಂಧಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ತಮಿಳುನಾಡಿನ ಮೀನುಗಾರರಿಗೆ ಶ್ರೀಲಂಕಾದ ನೌಕಾಪಡೆ ಸಿಬ್ಬಂದಿಯು ಬಂದೂಕು ತೋರಿಸಿ ಬೆದರಿಸಿ, ಸುಮಾರು 30ಕ್ಕೂ ಹೆಚ್ಚಿನ ಮೀನಿನ ಬಲೆಗಳನ್ನು ಹಾಳುಗೆಡವಿದ್ದಾರೆ ಎಂದು ಮೀನುಗಾರರು ಭಾನುವಾರ ಆರೋಪಿಸಿದ್ದಾರೆ.

‘ಒಂದೊಂದು ಬಲೆಯು ಸುಮಾರು ₹ 1ಲಕ್ಷ ಮೌಲ್ಯದ್ದಾಗಿದೆ. ಶನಿವಾರ ರಾತ್ರಿ ಸುಮಾರು 597 ದೋಣಿಗಳಲ್ಲಿ ಮೀನುಗಾರರು ಮೀನುಗಾರಿಕೆಗೆಂದು ತೆರಳಿದಾಗ ನೌಕಾಪಡೆಯ ಸಿಬ್ಬಂದಿ ಮೀನಿನ ಬಲೆಗಳನ್ನು ಕತ್ತರಿಸಿ ಹಾಕಿದ್ದಾರೆ’ ಎಂದು ಮೀನುಗಾರರ ಸಂಘದ ಅಧ್ಯಕ್ಷ ಸೇಸು ರಾಜಾ ದೂರಿದ್ದಾರೆ.

‘ಶ್ರೀಲಂಕಾ ನೌಕಾಪಡೆಯಿಂದ ಭಾರತೀಯ ಮೀನುಗಾರರ ಮೇಲಿನ ದಾಳಿಗಳು ಹೆಚ್ಚುತ್ತಿದ್ದು, ಅವರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

‘ದಾಳಿಯಿಂದ ಬೇಸತ್ತು ನಾವು ನಮ್ಮ ದೋಣಿಗಳನ್ನು ಮಾರಾಟ ಮಾಡಿ, ಈ ವೃತ್ತಿಯಿಂದಲೇ ಹಿಂದೆ ಸರಿದು ಬೇರೆ ವೃತ್ತಿಯಲ್ಲಿ ತೊಡಗಿಕೊಳ್ಳಬೇಕು ಎಂದು ಯೋಚಿಸಿದ್ದೇವೆ. ಆದರೆ, ದೋಣಿಗಳನ್ನು ಕೊಳ್ಳುವವರೇ ಇಲ್ಲ’ ಎಂದು ಅವರು ಬೇಸರಿಸಿದರು.

‘ಮೀನುಗಾರರು, ಅವರ ದೋಣಿ ಮತ್ತು ಬಲೆ ಮತ್ತಿತರ ಸಾಮಗ್ರಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಕ್ಷಣೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.