ADVERTISEMENT

ಕೃಷಿ ಕಾಯ್ದೆಗಳಿಗೆ 1 ವರ್ಷ: ದೆಹಲಿಯಲ್ಲಿ ಪ್ರತಿಭಟನೆ, ಎಸ್‌ಎಡಿಯಿಂದ ಕರಾಳ ದಿನ

ಪಿಟಿಐ
Published 17 ಸೆಪ್ಟೆಂಬರ್ 2021, 18:58 IST
Last Updated 17 ಸೆಪ್ಟೆಂಬರ್ 2021, 18:58 IST
ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆದ ‘ಕರಾಳ ದಿನ’ ಆಚರಣೆಯಲ್ಲಿ ಸಾವಿರಾರು ಜನರು ಸೇರಿದ್ದರು –ಪಿಟಿಐ ಚಿತ್ರ
ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆದ ‘ಕರಾಳ ದಿನ’ ಆಚರಣೆಯಲ್ಲಿ ಸಾವಿರಾರು ಜನರು ಸೇರಿದ್ದರು –ಪಿಟಿಐ ಚಿತ್ರ   

ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರವು ಅಂಗೀಕರಿಸಿ ಸೆ.17ಕ್ಕೆ ಒಂದು ವರ್ಷ ತುಂಬಿತು. ಈ ಹಿನ್ನೆಲೆಯಲ್ಲಿ ಶುಕ್ರವಾರವನ್ನು ‘ಕರಾಳ ದಿನ’ವನ್ನಾಗಿ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಆಚರಿಸಿತು. ಅದರ ಅಂಗವಾಗಿ ದೆಹಲಿಯಗುರುದ್ವಾರ ರಾಕಬ್‌ ಗಂಜ್‌ನಿಂದ ಸಂಸತ್‌ ಭವನದವರೆಗೆ ರೈತರ ಪ್ರತಿಭಟನಾ ಮೆರವಣಿಗೆ ಆಯೋಜಿಸಿತ್ತು.

ಶಿರೋಮಣಿ ಅಕಾಲಿ ದಳ ಅಧ್ಯಕ್ಷ ಸುಖಬೀರ್‌ ಸಿಂಗ್‌ ಬಾದಲ್‌ ಮತ್ತು ಮಾಜಿ ಕೇಂದ್ರ ಸಚಿವೆ ಹರ್‌ಸಿಮ್ರತ್‌ ಕೌರ್‌ ಬಾದಲ್‌ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.

ಪಕ್ಷದ ಸದಸ್ಯರು ಶುಕ್ರವಾರ ಬೆಳಿಗ್ಗೆಯೇ ಗುರುದ್ವಾರ ರಾಕಬ್‌ ಗಂಜ್‌ ಬಳಿ ಸೇರಿದ್ದರು. ರೈತರು ಗುರುದ್ವಾರ ರಾಕಬ್ ಗಂಜ್‌ ಬಳಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದ ಕಾರಣ ದೆಹಲಿಯ ಹಲವು ಭಾಗಗಳಲ್ಲಿ ಪೊಲೀಸ್‌ ಪಡೆಗಳನ್ನು ನಿಯೋಜಿಸಲಾಗಿತ್ತು. ವಾಹನಗಳನ್ನು ಪರಿಶೀಲಿಸಿದ ಬಳಿಕವೇ ಸಂಚಾರಕ್ಕೆ ಅನುವು ಮಾಡಲಾಗುತ್ತಿತ್ತು ಎಂದು ಹಿರಿಯ ಸಂಚಾರ ಪೊಲೀಸರೊಬ್ಬರು ಹೇಳಿದ್ದಾರೆ.

ADVERTISEMENT

ಪೊಲೀಸ್‌ ವಶಕ್ಕೆ ನಾಯಕರು

ಸುಖ್‌ಬೀರ್‌ ಸಿಂಗ್‌ ಬಾದಲ್‌ ಮತ್ತು ಹರ್‌ಸಿಮ್ರತ್‌ ಕೌರ್‌ ಸೇರಿ ಪ್ರತಿಭಟನಾಕಾರರನ್ನು ಸಂಸತ್‌ ಭವನ ಮಾರ್ಗ ದಲ್ಲಿ ಪೊಲೀಸರು ವಶಕ್ಕೆ ತೆಗೆದು ಕೊಂಡರು.ಬಳಿಕ ಅವರನ್ನು ಬಿಡುಗಡೆ ಮಾಡಿದರು.

‘ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸಿ ಅವರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಹಾಗಾಗಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು’ ಎಂದು ಪೊಲೀಸರು ಹೇಳಿದ್ದಾರೆ.

ಪ್ರತಿಭಟನೆ ಕುರಿತು ಟ್ವೀಟ್‌ ಮಾಡಿ ರುವಹರ್‌ಸಿಮ್ರತ್‌ ಕೌರ್‌, ‘ಇಂದು ನಡೆದ ಪ್ರತಿಭಟನೆ ರೈತರ ಅಸಮ್ಮತಿಯನ್ನು ಮಾತ್ರ ತೋರಿಸುವುದಿಲ್ಲ, ಬದಲಾಗಿ ನಿರಂಕುಶ ಪ್ರಭುತ್ವದ ವಿರುದ್ಧ ಪ್ರತಿರೋಧ ತೋರಿದ ದಿನವಾಗಿ ಇತಿಹಾಸದಲ್ಲಿ ದಾಖಲಾಗುತ್ತದೆ. ರೈತರಿಗೆ
ನ್ಯಾಯ ಕೊಡಿಸಲು ಎದ್ದ ಬಂಡಾಯದ ದಿನವನ್ನಾಗಿ ನಾವೆಲ್ಲರೂ ಈ ದಿನವನ್ನು ಗುರುತಿಸೋಣ’ ಎಂದಿದ್ದಾರೆ.

‘ರೈತರು ದೆಹಲಿ ಗಡಿಗಳಲ್ಲಿ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ನಾವು ಎನ್‌ಡಿಎ ಮೈತ್ರಿಕೂಟ ತೊರೆದ ಕುರಿತು ನಮಗೆ ಹೆಮ್ಮೆ ಇದೆ’ ಎಂದು ಅವರು ಹೇಳಿದ್ದಾರೆ.

ಸಂಚಾರದಲ್ಲಿ ಭಾರಿ ವ್ಯತ್ಯಯ

ಪ್ರತಿಭಟನೆಯಿಂದಾಗಿ ದೆಹಲಿಯ ಪ್ರಮುಖ ಪ್ರದೇಶಗಳಾದ ಲ್ಯುಟೆನ್ಸ್‌ ಮತ್ತು ಐಒಟಿ ಸೇರಿ ಹಲವೆಡೆ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿತ್ತು.

ದೆಹಲಿ ಸಂಚಾರ ಪೊಲೀಸರು ಹಲವು ಮಾರ್ಗಗಳನ್ನು ಮುಚ್ಚಿದ್ದರು ಮತ್ತು ಹಲವು ಮಾರ್ಗಗಳಿಗೆ ಬದಲಿ ಮಾರ್ಗಗಳನ್ನು ಒದಗಿಸಿದ್ದರು.

ಎರಡು ಮೆಟ್ರೊ ನಿಲ್ದಾಣ ಬಂದ್‌

ರೈತರು ಪ್ರತಿಭಟನೆ ನಡೆಸುತ್ತಿರುವ ಪ್ರದೇಶ ಗಳಲ್ಲಿ ಒಂದಾಗಿರುವ ದೆಹಲಿ–ಹರಿಯಾಣ ನಡುವಿನ ಟಿಕ್ರಿ ಗಡಿ ಬಳಿಯ ಎರಡು ಮೆಟ್ರೊ ನಿಲ್ದಾಣಗಳನ್ನು ಭದ್ರತೆಯ ದೃಷ್ಟಿಯಲ್ಲಿ ಮುಚ್ಚಲಾಗಿತ್ತು ಎಂದು ದೆಹಲಿ ಮೆಟ್ರೊ ರೈಲು ನಿಗಮ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.