ADVERTISEMENT

ವಿಶಾಖಪಟ್ಟಣ: ಕ್ರೇನ್ ಕುಸಿದು ಬಿದ್ದು 11 ಮಂದಿ ದುರ್ಮರಣ 

ಏಜೆನ್ಸೀಸ್
Published 1 ಆಗಸ್ಟ್ 2020, 14:32 IST
Last Updated 1 ಆಗಸ್ಟ್ 2020, 14:32 IST
ಕ್ರೇನ್‌ ನೆಲಕ್ಕುರುಳುತ್ತಿರುವ ದೃಶ್ಯ
ಕ್ರೇನ್‌ ನೆಲಕ್ಕುರುಳುತ್ತಿರುವ ದೃಶ್ಯ   

ವಿಶಾಖಪಟ್ಟಣ: ಹಿಂದೂಸ್ಥಾನ್‌ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ (ಎಚ್‌ಎಸ್‌ಎಲ್) ಶನಿವಾರ ಪ್ರಾಯೋಗಿಕವಾಗಿ ಲೋಡ್ ಪರೀಕ್ಷಾ ಕಾರ್ಯ‌ ನಡೆಸುತ್ತಿದ್ದ ವೇಳೆ 70 ಟನ್ ತೂಕದ‌ ಬೃಹತ್‌ ಜೆಟ್ಟಿ ಕ್ರೇನ್‌ ಕುಸಿದು ಹನ್ನೊಂದು ಮಂದಿ ಮೃತಪಟ್ಟಿದ್ದಾರೆ.

75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ದುರ್ಘಟನೆ ನಡೆದಿದೆ.

ಎರಡು ವರ್ಷಗಳ ಹಿಂದೆ ತಯಾರಾದ ಈ ಕ್ರೇನ್‌ ಅನ್ನು ಗುತ್ತಿಗೆದಾರರ ಬದಲಾವಣೆಯಿಂದಾಗಿ ನಿಯಮಿತ ಕಾರ್ಯಾಚರಣೆಗೆ ಬಳಸಿಕೊಂಡಿರಲಿಲ್ಲ. ಮೂರು ಹೊಸ ಗುತ್ತಿಗೆದಾರರ ನೆರವಿನಿಂದ ಎಚ್‌ಎಸ್‌ಎಲ್‌ ಪ್ರಾಯೋಗಿಕವಾಗಿ ಇದನ್ನು ಚಾಲನೆ ಮಾಡುತ್ತಿದ್ದಾಗ ಕ್ಯಾಬಿನ್ ಮತ್ತು ಬೇಸ್ ಕುಸಿದಿದೆ. ಕ್ರೇನ್‌ ಸಮೀಪವೇ ಇದ್ದ ಹನ್ನೊಂದು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ವಿ. ವಿನಯ್‌ ಚಾಂದ್‌ ತಿಳಿಸಿದ್ದಾರೆ.

ADVERTISEMENT

ಎಚ್ಎಸ್‌ಎಲ್‌ ಮೇಲ್ವಿಚಾರಕರು ಸೇರಿದಂತೆ ಕಂಪನಿಯ ಮೂವರು ನೌಕರರು ಮೃತಪಟ್ಟಿದ್ದಾರೆ. ಉಳಿದ ಏಳು ಮಂದಿ ಮೃತರು ಮೂರು ವಿವಿಧ ಗುತ್ತಿಗೆ ಏಜೆನ್ಸಿಯ ಕಾರ್ಮಿಕರಾಗಿದ್ದರು.

ಘಟನೆ ಸಂಬಂಧ ತನಿಖೆ ನಡೆಸಿ, ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ಆಯುಕ್ತರಿಗೆ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಸೂಚಿಸಿದ್ದಾರೆ.

ಎಚ್‌ಎಸ್‌ಎಲ್‌ನಲ್ಲಿ ಜೆಟ್ಟಿ ಕ್ರೇನ್‌ ನಿರ್ಮಿಸಲು ಮುಂಬೈನ ಅನುಪಮ್‌ ಕ್ರೇನ್ಸ್‌ ಎರಡು ವರ್ಷಗಳ ಹಿಂದೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಇದು ಕಾರ್ಯರೂಪಕ್ಕೆ ಬರಲಿಲ್ಲ. ಕೊನೆಗೆ, ಗುತ್ತಿಗೆಯನ್ನು ವಾಪಸ್‌ ಪಡೆದು, ಗ್ರೀನ್‌ಫೀಲ್ಡ್‌ ಕಂಪನಿಗೆ ಈ ಗುತ್ತಿಗೆ ನೀಡಲಾಗಿತ್ತು.

ಸಮಿತಿ ರಚನೆ: ಪ್ರಕರಣದ ತನಿಖೆಗೆ ಎರಡು ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಎಚ್‌ಎಸ್‌ಎಲ್,‌ ನಿರ್ದೇಶಕರ ನೇತೃತ್ವದ ಆಂತರಿಕ ಸಮಿತಿಯನ್ನು ರಚಿಸಿದೆ. ಎಂಜಿನಿಯರ್‌ಗಳ ಸ್ವತಂತ್ರ ಸಮಿತಿಯೊಂದನ್ನು ಜಿಲ್ಲಾಧಿಕಾರಿ ರಚಿಸಿದ್ದಾರೆ. ಆಂಧ್ರ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗಗಳ ಮುಖ್ಯಸ್ಥರನ್ನು ಈ ಸಮಿತಿ ಒಳಗೊಂಡಿದೆ. ನಿರ್ಲಕ್ಷ್ಯದಿಂದ ಈ ದುರಂತ ನಡೆದಿರಬಹುದೇ ಎಂಬುದನ್ನು ಸಮಿತಿ ತನಿಖೆ ನಡೆಸಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.