ADVERTISEMENT

ಛತ್ತೀಸಗಢ: ಸುಕ್ಮಾದಲ್ಲಿ ನಕ್ಸಲರು ಅಡಗಿಸಿಟ್ಟಿದ್ದ 10 ಕೆ.ಜಿ ಐಇಡಿ ಪತ್ತೆ

ಪಿಟಿಐ
Published 7 ಜನವರಿ 2025, 10:43 IST
Last Updated 7 ಜನವರಿ 2025, 10:43 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಸುಕ್ಮಾ: ಛತ್ತೀಸಗಢದ ಬಿಜಾಪುರದಲ್ಲಿ ನಡೆದ ಸ್ಫೋಟದಲ್ಲಿ ಎಂಟು ಪೊಲೀಸ್ ಸಿಬ್ಬಂದಿ ಮತ್ತು ಚಾಲಕ ಸಾವಿಗೀಡಾದ ಒಂದು ದಿನದ ನಂತರ, ಭದ್ರತಾ ಪಡೆಗಳು ಇಂದು ಸುಕ್ಮಾ ಜಿಲ್ಲೆಯಲ್ಲಿ ಮಾವೋವಾದಿಗಳು ಹುದುಗಿಸಿದ್ದ 10 ಕೆ.ಜಿ ಸುಧಾರಿತ ಸ್ಫೋಟಕ ಸಾಧನವನ್ನು(ಐಇಡಿ) ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಜಿಲ್ಲಾ ಪೊಲೀಸರ ತಂಡವು ಕೊಂಟಾ-ಗೋಲಪಲ್ಲಿ ರಸ್ತೆಯ ಬೆಲ್ಪೊಚ್ಚ ಗ್ರಾಮದ ಬಳಿ ಸ್ಫೋಟಕ ಸಾಧನವನ್ನು ಪತ್ತೆ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ರಸ್ತೆಯಲ್ಲಿ ಐಇಡಿ ಹುದುಗಿಸಿರುವುದನ್ನು ಪತ್ತೆಮಾಡಿದ ಭದ್ರತಾ ಸಿಬ್ಬಂದಿ ದೊಡ್ಡ ಅಪಾಯವನ್ನು ತಡೆಗಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬಿಜಾಪುರ ಜಿಲ್ಲೆಯ ಕುಟ್ರು ಪೊಲೀಸ್ ಠಾಣೆ ವ್ಯಾಪ್ತಿಯ ಅಂಬೇಲಿ ಗ್ರಾಮದ ಬಳಿ ನಕ್ಸಲರು ಸೋಮವಾರ 60-70 ಕೆ.ಜಿ ತೂಕದ ಐಇಡಿ ಬಳಸಿ ಭದ್ರತಾ ಸಿಬ್ಬಂದಿಯ ವಾಹನವನ್ನು ಸ್ಫೋಟಿಸಿದ್ದರು. ಈ ವಿಧ್ವಂಸಕ ಕೃತ್ಯದಲ್ಲಿ ಎಂಟು ಮಂದಿ ಭದ್ರತಾ ಸಿಬ್ಬಂದಿ, ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ರಾಜ್ಯ ಪೊಲೀಸ್‌ನ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಮತ್ತು ಬಸ್ತಾರ್ ಫೈಟರ್ಸ್ ಘಟಕಗಳ ತಲಾ ನಾಲ್ವರು ಮತ್ತು ವಾಹನದ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದರು.

ಸುಕ್ಮಾ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ವಿಭಾಗದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ನಕ್ಸಲರು ಆಗಾಗ್ಗೆ ಸ್ಫೋಟಕಗಳನ್ನು ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.