ಬೆಂಗಳೂರು: ₹1000 ಕೋಟಿ ಅಬಕಾರಿ ಕಿಕ್‌ಬ್ಯಾಕ್ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಡಿಎಂಕೆ ಸರ್ಕಾರ ರೂಪಾಯಿ(₹) ವಿವಾದ ಭುಗಿಲೆಬ್ಬಿಸಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಶುಕ್ರವಾರ ಆರೋಪ ಮಾಡಿದ್ದಾರೆ.
ಜಯನಗರದ ಜೈನ್ ಡೀಮ್ಡ್ ವಿಶ್ವ ವಿದ್ಯಾಲಯದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಣ್ಣಾಮಲೈ ರೂಪಾಯಿ ಚಿಹ್ನೆಯ ಕುರಿತಂತೆ ತಮಿಳುನಾಡಿನಲ್ಲಿ ಉದ್ದೇಶ ಪೂರ್ವಕವಾಗಿಯೇ ವಿವಾದ ಸೃಷ್ಟಿಸಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರ ಅಳವಡಿಸಿಕೊಂಡಿರುವ ₹ ಚಿಹ್ನೆಯ ಬದಲಿಗೆ ತಮಿಳುನಾಡು ಸರ್ಕಾರ ಶುಕ್ರವಾರ ಮಂಡಿಸಿದ ತನ್ನ ಬಜೆಟ್‌ನಲ್ಲಿ ತಮಿಳಿನ ‘ರೂ’ ಪದವನ್ನು ಬಳಕೆ ಮಾಡಿದೆ.
ಜಾರಿ ನಿರ್ದೇಶನಾಲಯ(ಇಡಿ) ತಮಿಳುನಾಡಿನ ಟಿಎಎಸ್‌ಎಮ್‌ಎಸಿಯಲ್ಲಿ (ಸರ್ಕಾರಿ ಆಡಳಿತದ ಮದ್ಯ ಮಾರಾಟ ನಿಗಮ) ₹1000 ಕೋಟಿ ಅಬಕಾರಿ ಕಿಕ್‌ಬ್ಯಾಕ್ ಪತ್ತೆ ಮಾಡಿದೆ.ಇದರಿಂದ ಜನರ ಗಮನ ಬೇರೆಡೆ ಸೆಳೆಯಲು ತಮಿಳುನಾಡು ಸರ್ಕಾರ ₹ ವಿವಾದ ಎಬ್ಬಿಸಿದೆ ಎಂದರು.
ತಮಿಳುನಾಡು ಸರ್ಕಾರದ ಬಜೆಟ್ ಕಣ್ಣೊರೆಸುವ ತಂತ್ರವಾಗಿದೆ. ಕಳೆದ ನಾಲ್ಕು ಬಜೆಟ್‌ಗಳಿಗೆ ಹೋಲಿಸಿದರೆ ಈ ವರ್ಷದ ಬಜೆಟ್‌ನಲ್ಲಿ ಏನೇನೂ ಇಲ್ಲ. ಹೀಗಾಗಿ ಬಿಜೆಪಿಯ ನಾಲ್ವರು ಶಾಸಕರು ಸದನದಲ್ಲಿ ಸಭಾತ್ಯಾಗ ಮಾಡಿದ್ದಾರೆ ಎಂದು ಅಣ್ಣಾಮಲೈ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.