ADVERTISEMENT

ಒಂದು ಸಾವಿರ ವರ್ಷದ ಹಳೆಯ ಶಿವಾ ದೇವಾಲಯಕ್ಕೆ ಮಹಾರಾಷ್ಟ್ರ ಸರ್ಕಾರದಿಂದ ಕಾಯಕಲ್ಪ

ಮಹಾರಾಷ್ಟ್ರ ಸರ್ಕಾರದಿಂದ ₹43 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 12:08 IST
Last Updated 21 ಡಿಸೆಂಬರ್ 2020, 12:08 IST
ಅಂಬರನಾಥನಲ್ಲಿರುವ ಸುಮಾರು ಒಂದು ಸಾವಿರ ವರ್ಷ ಹಳೆಯದಾದ ಆಕರ್ಷಕ ಶಿವಾ ದೇವಾಲಯ
ಅಂಬರನಾಥನಲ್ಲಿರುವ ಸುಮಾರು ಒಂದು ಸಾವಿರ ವರ್ಷ ಹಳೆಯದಾದ ಆಕರ್ಷಕ ಶಿವಾ ದೇವಾಲಯ   

ಮುಂಬೈ: ಠಾಣೆ ಜಿಲ್ಲೆಯ ಅಂಬರನಾಥನಲ್ಲಿರುವ ಸುಮಾರು ಒಂದು ಸಾವಿರ ವರ್ಷ ಹಳೆಯದಾದ ಆಕರ್ಷಕ ಶಿವಾ ದೇವಾಲಯಕ್ಕೆ ಕಾಯಕಲ್ಪ ನೀಡುವ ಕಾರ್ಯ ಈಗ ಆರಂಭವಾಗಿದೆ.

ಭಾರತೀಯ ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿರುವ ಈ ದೇವಾಲಯದ ಭಕ್ತರಿಗೆ ಮತ್ತು ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ದೇವಸ್ಥಾನದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ₹43 ಕೋಟಿಯನ್ನು ಮೀಸಲಿಟ್ಟಿದೆ.

‘ಕೆಲವು ವರ್ಷಗಳ ಹಿಂದೆ ಶಿವಾ ದೇವಾಲಯಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಮೂಲಸೌಕರ್ಯಗಳ ಕೊರತೆ ಇತ್ತು. ಅಲ್ಲಿ ಎಲ್ಲರಿಗೂ ಅನುಕೂಲವಾಗುವ ಸೌಲಭ್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಲಾಗಿದೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ತಿಳಿಸಿದ್ದಾರೆ.

ADVERTISEMENT

ದೇವಾಲಯದ ಅಭಿವೃದ್ಧಿ ಯೋಜನೆಯ ಉಸ್ತುವಾರಿಯನ್ನು ಮುಖ್ಯಮಂತ್ರಿ ಅವರ ಆಪ್ತರಾಗಿರುವ ನಗರಾಭಿವೃದ್ಧಿ ಸಚಿವ ಏಕನಾಥ್‌ ಶಿಂಧೆ ಹಾಗೂ ಅವರ ಪುತ್ರ ಮತ್ತು ಕಲ್ಯಾಣ ಕ್ಷೇತ್ರದ ಶಿವಸೇನಾ ಸಂಸದ ಡಾ. ಶ್ರೀಕಾಂತ್‌ ಶಿಂಧೆ ವಹಿಸಿಕೊಂಡಿದ್ದಾರೆ.

11ನೇ ಶತಮಾನದಲ್ಲಿ ನಿರ್ಮಿಸಿರುವ ಈ ಶಿವಾ ದೇವಾಲಯವನ್ನು ಅಂಬರೇಶ್ವರ ಶಿವಾ ದೇವಾಲಯ ಎಂದೂ ಕರೆಯುತ್ತಾರೆ. ಸ್ಥಳೀಯವಾಗಿ ಪುರಾತನ ಶಿವಾಲಯ ಎಂದು ಕರೆಯಲಾಗುತ್ತದೆ.

ಶಿಲಾಹಾರದ ಚಿತ್ತರಾಜಾ ದೊರೆ ಈ ದೇವಾಲಯವನ್ನು ನಿರ್ಮಿಸಿದ್ದರು. ನಂತರ ಅವರ ಪುತ್ರ ಮುಮುನ್ನಿ ಈ ದೇವಾಲಯವನ್ನು ನವೀಕರಣಗೊಳಿಸಿದ್ದರು ಎಂದು ಇತಿಹಾಸ ತಜ್ಞರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.