ನರೇಂದ್ರ ಮೋದಿ
(ಪಿಟಿಐ ಚಿತ್ರ)
ಬಿಕಾನೆರ್ (ರಾಜಸ್ಥಾನ): 'ಅಮೃತ ಭಾರತ' ಯೋಜನೆಯಡಿ ₹1,100 ಕೋಟಿ ವೆಚ್ಚದಲ್ಲಿ ನವೀಕರಿಸಿದ 103 ರೈಲು ನಿಲ್ದಾಣಗಳ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೊ ಕಾನ್ಪ್‌ರೆನ್ಸ್ ಮೂಲಕ ನೆರವೇರಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, 'ದೇಶವು ತನ್ನ ರೈಲು ಜಾಲ ಮತ್ತು ಮೂಲಸೌಕರ್ಯವನ್ನು ಆಧುನೀಕರಿಸುತ್ತಿದೆ. ಇದು ದೇಶದ ವೇಗ ಮತ್ತು ಪ್ರಗತಿಯನ್ನು ಬಿಂಬಿಸುತ್ತದೆ' ಎಂದು ಹೇಳಿದ್ದಾರೆ.
₹1,100 ಕೋಟಿಗೂ ಹೆಚ್ಚು ವೆಚ್ಚದಲ್ಲಿ 18 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ 86 ಜಿಲ್ಲೆಗಳಲ್ಲಿ ಒಟ್ಟು 103 ನವೀಕರಿಸಿದ ಅಮೃತ ಭಾರತ ರೈಲು ನಿಲ್ದಾಣಗಳನ್ನು ಪ್ರಧಾನಿ ಮೋದಿ ದೇಶಕ್ಕೆ ಸಮರ್ಪಿಸಿದ್ದಾರೆ.
ನವೀಕರಿಸಿದ ರೈಲ್ವೆ ನಿಲ್ದಾಣಗಳು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರಲಿವೆ.
'ನವೀಕರಣಗೊಂಡ ಈ ರೈಲು ನಿಲ್ದಾಣಗಳು ಅಮೃತ ಭಾರತ ನಿಲ್ದಾಣಗಳೆಂದು ಗುರುತಿಸಲಿವೆ. 100ಕ್ಕೂ ಹೆಚ್ಚು ಅಮೃತ ಭಾರತ ನಿಲ್ದಾಣಗಳ ನವೀಕರಣ ಪೂರ್ಣಗೊಂಡಿವೆ. ಹಿಂದಿನ ಪರಿಸ್ಥಿತಿ ಹೇಗಿತ್ತು ಮತ್ತು ಈಗಿನ ಪರಿಸ್ಥಿತಿ ಹೇಗಿದೆ ಎಂಬುದರ ಕುರಿತು ಜನರು ಸಾಮಾಜಿಕ ಮಾಧ್ಯಗಳಲ್ಲಿ ಹಂಚುತ್ತಿದ್ದಾರೆ' ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.
'ಈ ಅಮೃತ ಭಾರತ ಕೇಂದ್ರಗಳಲ್ಲಿ ಅಭಿವೃದ್ಧಿ ಹಾಗೂ ಪರಂಪರೆ ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದೆ. ಅವುಗಳು ಸ್ಥಳೀಯ ಕಲೆ ಹಾಗೂ ಸಂಸ್ಕೃತಿಯ ಪ್ರತೀಕವಾಗಿವೆ. ಪ್ರತಿಯೊಂದು ಅಮೃತ ಭಾರತ ನಿಲ್ದಾಣದಲ್ಲಿ ದೇಶದ ಸಾವಿರಾರು ವರ್ಷಗಳ ಹಳೆಯ ಪರಂಪರೆಯನ್ನು ಕಾಣಬಹುದಾಗಿದೆ' ಎಂದು ಹೇಳಿದ್ದಾರೆ.
'ಅಮೃತ ಭಾರತ' ಈ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದ್ದು, ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ' ಎಂದಿದ್ದಾರೆ.
ಅಮೃತ ಭಾರತ ಯೋಜನೆ ಅಡಿಯಲ್ಲಿ 1,300ಕ್ಕೂ ಹೆಚ್ಚು ನಿಲ್ದಾಣಗಳನ್ನು ನವೀಕರಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.