ADVERTISEMENT

ಅಸ್ಸಾಂ ಪ್ರವಾಹ: ನೆರವಿನ ಭರವಸೆ ನೀಡಿದ ಪ್ರಧಾನಿ

ಪಿಟಿಐ
Published 15 ಜುಲೈ 2019, 20:00 IST
Last Updated 15 ಜುಲೈ 2019, 20:00 IST
 ಪ್ರವಾಹ
 ಪ್ರವಾಹ   

ನವದೆಹಲಿ: ಅಸ್ಸಾಂ ಪ್ರವಾಹ ಕುರಿತು ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೂರವಾಣಿ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಪ್ರಧಾನಿಗೆ ಪರಿಸ್ಥಿತಿ ವಿವರಿಸಿರುವ ಸೊನೊವಾಲ್ ಅವರು, ರಾಜ್ಯದ 33 ಜಿಲ್ಲೆಗಳಲ್ಲಿ 31 ಜಿಲ್ಲೆ ಪ್ರವಾಹದಿಂದ ಹಾನಿಗೀಡಾಗಿವೆ ಎಂದು ತಿಳಿಸಿದ್ದಾರೆ. ಪರಿಸ್ಥಿತಿ ನಿರ್ವಹಿಸಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ.

ಭಾನುವಾರ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ವಿಕೋಪಕ್ಕೆ ತಲುಪಿ, ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿತ್ತು. ಈ ತನಕ 26.5 ಲಕ್ಷ ಜನರು ಕಷ್ಟಕ್ಕೆ ಸಿಲುಕಿದ್ದಾರೆ.

ADVERTISEMENT

‘ಪ್ರವಾಹದಿಂದ ಅತಿಹೆಚ್ಚು ಹಾನಿಗೀಡಾಗಿರುವ ಜಿಲ್ಲೆ ಬಾರಪೇಟಾ ಆಗಿದ್ದು, ಇಲ್ಲಿ 7.35 ಲಕ್ಷ ಜನರು ಸಂಕಷ್ಟದಕ್ಕೆ ಸಿಲುಕಿದ್ದಾರೆ. ಮಾರಿಗಾಂವ್‌ನಲ್ಲಿ 3.50 ಲಕ್ಷ, ಧುಬ್ರಿಯಲ್ಲಿ 3.38 ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಶೇ 70 ಭಾಗ ಹಾನಿಗೊಳಗಾಗಿದೆ’ ಎಂದು ರಾಜ್ಯ ವಿಪತ್ತು ನಿರ್ವಹಣಾ ಮಂಡಳಿ ತಿಳಿಸಿದೆ.

ಮೇಘಾಲಯ ಪ್ರವಾಹ: ಸಂಕಷ್ಟ

ತುರಾ: ಮೇಘಾಲಯದ ಪಶ್ಚಿಮ ಗಾರೊ ಗುಡ್ಡಗಾಡು ಜಿಲ್ಲೆಯಲ್ಲಿ ಪ್ರವಾಹದಿಂದ ಕನಿಷ್ಠ 1.14 ಲಕ್ಷ ಜನರು ತೊಂದರೆಗೀಡಾಗಿದ್ದಾರೆ.

ಒಂದು ವಾರದಿಂದ ಸತತವಾಗಿ ಮಳೆಸುರಿಯುತ್ತಿದೆ. ಅಸ್ಸಾಂನಿಂದ ಹರಿದುಬರುವ ಬ್ರಹ್ಮಪುತ್ರ ಹಾಗೂ ಜಿಂಜಿರಮ್ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ರಾಜಧಾನಿ ಶಿಲ್ಲಾಂಗ್‌ನಲ್ಲಿ ಸಹ ಪ್ರವಾಹ ಉಂಟಾಗಿದೆ.

ಪ್ರವಾಹ ಪೀಡಿತ ಜನರಿಗೆ 7 ದಿನಗಳ ಪರಿಹಾರ ನೀಡುವುದಾಗಿ ಅಧಿಕಾರಿಗಳು ಘೋಷಿಸಿದ್ದಾರೆ. ಜನರನ್ನು ಸುರಕ್ಷಿತ ಪ್ರದೇಶಕ್ಕೆಸ್ಥಳಾಂತರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.