ADVERTISEMENT

ಶನಿ ಶಿಂಗ್ಣಾಪುರ: ದೇವಸ್ಥಾನ ಮಂಡಳಿಯಿಂದ 114 ಮುಸ್ಲಿಮರು ಸೇರಿ 167 ಸಿಬ್ಬಂದಿ ವಜಾ

ಪಿಟಿಐ
Published 15 ಜೂನ್ 2025, 15:39 IST
Last Updated 15 ಜೂನ್ 2025, 15:39 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಮುಂಬೈ: ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯಲ್ಲಿರುವ ಶನಿ ಶಿಂಗ್ಣಾಪುರ ದೇವಸ್ಥಾನದ ಆಡಳಿತ ಮಂಡಳಿಯು 114 ಜನ ಮುಸ್ಲಿಮರು ಸೇರಿದಂತೆ ತನ್ನ ಒಟ್ಟು 167 ಸಿಬ್ಬಂದಿಯನ್ನು ವಜಾ ಮಾಡಿದೆ. ಶಿಸ್ತುಕ್ರಮ ಉಲ್ಲಂಘನೆ ಹಾಗೂ ಅಕ್ರಮಗಳ ಆರೋಪದಡಿ ಸಿಬ್ಬಂದಿ ಮೇಲೆ ಈ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. 

‘ವಜಾಗೊಂಡಿರುವವರು ಸೇವಾ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿತು. ಹೀಗಾಗಿ ಸಂಪೂರ್ಣ ಆಡಳಿತಾತ್ಮಕವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಆಡಳಿತ ಮಂಡಳಿಯ ಅಧಿಕಾರಿಯೊಬ್ಬರು ಹೇಳಿದರು. 

ದೇವಸ್ಥಾನದ ಆವರಣದಲ್ಲಿ ಮುಸ್ಲಿಂ ಸಿಬ್ಬಂದಿ ಇರುವುದಕ್ಕೆ ಕೆಲ ಹಿಂದೂ ಸಂಘಟನೆಗಳು ಇತ್ತೀಚೆಗೆ ವಿರೋಧ ವ್ಯಕ್ತಪಡಿಸಿದ್ದವು. ‘ಶನಿ ದೇವರ ಪವಿತ್ರ ಸ್ಥಳದಲ್ಲಿ ಹಿಂದೂಯೇತರ ಕೆಲಸಗಾರರು ಇರುವುದು ಸ್ವೀಕಾರಾರ್ಹವಲ್ಲ. ಅವರನ್ನು ಕೆಲಸದಿಂದ ತೆಗೆದು ಹಾಕಬೇಕು’ ಎಂದು ಆಗ್ರಹಿಸಿದ್ದವು. ಇದಾದ ಕೆಲ ದಿನಗಳಲ್ಲಿ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. 

ADVERTISEMENT

ತಮ್ಮ ಬೇಡಿಕೆ ಈಡೇರದಿದ್ದರೆ ಜೂ.14ರಂದು ದೇವಸ್ಥಾನದ ಮುಂದೆ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. 

ಧರ್ಮದ ಆಧಾರದ ಮೇಲೆ ಯಾರನ್ನೂ ವಜಾ ಮಾಡಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆಯಾದರೂ ವಜಾಗೊಂಡವರಲ್ಲಿ ಬಹುತೇಕರು ಮುಸ್ಲಿಮರು. 

ಈ ಕುರಿತು ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಶಾಸಕ ರಯೀಸ್‌ ಶೇಖ್ ಅವರು, ‘ಧರ್ಮದ ಆಧಾರದಲ್ಲಿ ಉದ್ಯೋಗಿಗಳನ್ನು ವಜಾ ಮಾಡುವುದು ನಾಗರಿಕ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದು ಟೀಕಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.