ADVERTISEMENT

12 ಶಂಕಿತ ಉಗ್ರರು ಫೆ.5ರ ವರೆಗೂ ಎನ್‌ಐಎ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2016, 12:12 IST
Last Updated 25 ಜನವರಿ 2016, 12:12 IST
12 ಶಂಕಿತ ಉಗ್ರರು ಫೆ.5ರ ವರೆಗೂ ಎನ್‌ಐಎ ವಶಕ್ಕೆ
12 ಶಂಕಿತ ಉಗ್ರರು ಫೆ.5ರ ವರೆಗೂ ಎನ್‌ಐಎ ವಶಕ್ಕೆ   

ನವದೆಹಲಿ (ಪಿಟಿಐ): ಇಸ್ಲಾಮಿಕ್ ಸ್ಟೇಟ್‌ ಉಗ್ರ ಸಂಘಟನೆಯ ನಂಟಿನ ಆರೋಪದಡಿ ದೇಶದ ವಿವಿಧೆಡೆ ಬಂಧನಕ್ಕೆ ಒಳಗಾಗಿರುವ 12 ಶಂಕಿತ ಉಗ್ರರರನ್ನು ವಿಶೇಷ ನ್ಯಾಯಾಲಯವು ಫೆಬ್ರುವರಿ 5ರ ವರೆಗೂ ರಾಷ್ಟ್ರೀಯ ತನಿಖಾ ತಂಡದ ವಶಕ್ಕೆ ನೀಡಿದೆ.

ರಹಸ್ಯ ವಿಚಾರಣೆಯ ವೇಳೆ, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ವಶಕ್ಕೆ ನೀಡುವಂತೆ ಎನ್‌ಐಎ ವಿಶೇಷ ನ್ಯಾಯಾಧೀಶ ಅಮರನಾಥ್‌ ಅವರನ್ನು ತನಿಖಾ ದಳ ಕೋರಿತು. ಆದರೆ, ನ್ಯಾಯಾಲಯವು 11 ದಿನಗಳ ಕಾಲ ಆರೋಪಿಗಳನ್ನು ಅವರ ವಶಕ್ಕೆ ನೀಡಿತು.

‘ಪ್ರಾಥಮಿಕ ವಿಚಾರಣೆಯ ವೇಳೆ, ಎಲ್ಲಾ ಆರೋಪಿಗಳು ಐಎಸ್ ಉಗ್ರ ಸಂಘಟನೆ ಜತೆಗಿನ ತಮ್ಮ ನಂಟಿನ ಕುರಿತ ಬಹಿರಂಗ ಪಡಿಸಿದ್ದಾರೆ’ ಎಂದು ನ್ಯಾಯಾಲಯಕ್ಕೆ ಎನ್ಐಎ ತಿಳಿಸಿತು.

12 ಆರೋಪಿಗಳಲ್ಲಿ 10 ಜನರ ಪರವಾಗಿ ಹಾಜರಾಗಿದ್ದ ವಕೀಲ ಎಂ.ಎಸ್.ಖಾನ್, ಆರೋಪಿಗಳನ್ನು ವಶಕ್ಕೆ ಪಡೆಯುವ ಎನ್‌ಐಎ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

ಆರೋಪಿಗಳ ವಿರುದ್ಧ ಭಯೋತ್ಪಾದನಾ ಶಂಕೆಯ ಆಧಾರದಲ್ಲಿ ಎನ್‌ಐಎ ಎಫ್‌ಐಆರ್‌ ದಾಖಲಿಸಿದೆ. ಆದರೆ, ಅವರು ಯಾವುದೇ ಉಗ್ರ ಕೃತ್ಯ ಎಸೆಗಿಲ್ಲ ಎಂದು ವಾದಿಸಿದರು.

ಅಲ್ಲದೇ, ಜನವರಿ 22 ಹಾಗೂ 23 ರಂದು ಆರೋಪಿಗಳನ್ನು ತನಿಖಾ ದಳವು ಬಂಧಿಸಿತ್ತು. ಅಂದಿನಿಂದ ಈ ತನಕ ಅವರು ಎನ್‌ಐಎ ವಶದಲ್ಲಿದ್ದರು. ಆದ್ದರಿಂದ ಆರೋಪಿಗಳನ್ನು ಮತ್ತೆ ತನಿಖಾ ದಳದ ವಶಕ್ಕೆ ನೀಡುವ ಅಗತ್ಯವಿಲ್ಲ ಎಂದೂ ವಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.