ADVERTISEMENT

ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ 12 ಸಿಬ್ಬಂದಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 14:39 IST
Last Updated 22 ಜುಲೈ 2021, 14:39 IST
ಗುಜರಾತ್‌ನ ಉಮಾರ್‌ಗಂ ಬಳಿ ಅರಬ್ಬಿ ಸಮುದ್ರದಲ್ಲಿ ಬುಧವಾರ ಸಿಲುಕಿದ್ದ ಕಾಂಚನ್‌ ಹಡಗಿನಿಂದ 12 ಸಿಬ್ಬಂದಿಯನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ –(ಪಿಟಿಐ ಚಿತ್ರ).
ಗುಜರಾತ್‌ನ ಉಮಾರ್‌ಗಂ ಬಳಿ ಅರಬ್ಬಿ ಸಮುದ್ರದಲ್ಲಿ ಬುಧವಾರ ಸಿಲುಕಿದ್ದ ಕಾಂಚನ್‌ ಹಡಗಿನಿಂದ 12 ಸಿಬ್ಬಂದಿಯನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ –(ಪಿಟಿಐ ಚಿತ್ರ).   
ಮುಂಬೈ: ಮಹಾರಾಷ್ಟ್ರ- ಗುಜರಾತ್ ಕರಾವಳಿಯ ಉಮಾರ್‌ಗಂ ಬಳಿ ಅರಬ್ಬಿ ಸಮುದ್ರದಲ್ಲಿ ವ್ಯಾಪಾರಿ ಹಡಗಿನಲ್ಲಿ ಸಿಲುಕಿದ್ದ 12 ಮಂದಿಯನ್ನು ಗುರುವಾರ ಭಾರತೀಯ ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ.

ಇಂಧನ ಮಲೀನದಿಂದಾಗಿ ಎಂ.ವಿ. ಕಾಂಚನ್‌ ಹಡಗಿನ ಎಂಜಿನ್‌ ಸ್ಥಗಿತಗೊಂಡಿದ್ದು, ಹಡಗು ಸಮುದ್ರದ ಮಧ್ಯೆ ಸಿಲುಕಿರುವ ಬಗ್ಗೆ ನೌಕಾ ಸಂವಹನ ಕೇಂದ್ರದ ಮಹಾನಿರ್ದೇಶಕರಿಂದ ಭಾರತೀಯ ಕರಾವಳಿ ರಕ್ಷಣಾ ಪ‍ಡೆಯ ಪಶ್ಚಿಮ ವಿಭಾಗದ ಸಾಗರಯಾನ ರಕ್ಷಣಾ ಸಮನ್ವಯ ಕೇಂದ್ರಕ್ಕೆ (ಎಂಆರ್‌ಸಿಸಿ) ಬುಧವಾರ ಮಾಹಿತಿ ಬಂದಿತ್ತು. ಆ ಪ್ರದೇಶದಲ್ಲಿ ಹವಾಮಾನ ಕೂಡ ವೈಪರೀತ್ಯದಿಂದ ಕೂಡಿದ್ದು, ಗಂಟೆಗೆ 50 ನಾಟಿಕಲ್‌ ಮೈಲು ವೇಗದ ಗಾಳಿ ಬೀಸುವ ಜತೆಗೆ ಸಾಗರದಲ್ಲಿ ಅಲೆಗಳು 3 ರಿಂದ 2.5 ಮೀಟರ್ ಎತ್ತರಕ್ಕೆ ಏಳುತ್ತಿದ್ದವು.
ಸ್ಟೀಲ್‌ ಕಾಯಿಲ್ಸ್‌ನ ಸರಕು ತುಂಬಿರುವ ಹಡಗು ಬಲ ಬದಿಗೆ ವಾಲುತ್ತಿದೆ ಎಂದು ಹಡಗಿನ ಮಾಸ್ಟರ್‌ ಬುಧವಾರ ಸಂಜೆಯ ವೇಳೆಗೆ ಮಾಹಿತಿ ನೀಡಿದ್ದು, ಎಂಆರ್‌ಸಿಸಿಯುತಕ್ಷಣವೇ ಅಂತರರಾಷ್ಟ್ರೀಯ ಸುರಕ್ಷತಾ ಜಾಲವನ್ನು (ಐಎಸ್‌ಎನ್‌) ಸಕ್ರಿಯಗೊಳಿಸಿ, ಎಂ.ವಿ. ಕಾಂಚನ್‌ ಹಡಗಿನ ನೆರವಿಗೆ ಧಾವಿಸಲು ಹತ್ತಿರದ ಹಡಗುಗಳನ್ನು ಗುರುತಿಸಿತು.
ಹತ್ತಿರದಲ್ಲಿದ್ದ ಎಂ.ವಿ.ಹರ್ಮೀಜ್ ಹಡಗು ತಕ್ಷಣವೇ ಎಂ.ವಿ. ಕಾಂಚನ್‌ ಹಡಗಿನ ಕಡೆಗೆ ಧಾವಿಸಿತು. ಎಂ.ವಿ.ಹರ್ಮೀಜ್ ಹಡಗಿನ ಸಿಬ್ಬಂದಿ ರಾತ್ರಿ ಸಾಹಸಮಯ ಕಾರ್ಯಾಚರಣೆ ನಡೆಸಿ ಎಂ.ವಿ. ಕಾಂಚನ್ ಹಡಗಿನಲ್ಲಿ ಸಿಲುಕಿದ್ದ ಎಲ್ಲ 12 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದರು. ಇದೇ ವೇಳೆ ನೌಕಾ ಮಹಾ ನಿರ್ದೇಶಕರಿಂದ ನಿಯೋಜಿಸಿದ್ದ ಈಟಿವಿ ವಾಟರ್‌ ಲಿಲ್ಲಿ ಹಡಗು ಕೂಡ ಗುರುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಸ್ಥಳಕ್ಕೆ ತಲುಪಿ ನೆರವಿಗೆ ನಿಂತಿತು.

ಈ ನಡುವೆ ದಮನ್‌ನಿಂದ ಕರಾವಳಿ ರಕ್ಷಣಾ ಪಡೆಯ ಹೆಲಿಕಾಪ್ಟರ್ ಕೂಡ ಈ ಪ್ರದೇಶದ ವೈಮಾನಿಕ ವೀಕ್ಷಣೆ ನಡೆಸಿತು. ಸಮುದ್ರದಲ್ಲಿ ಸಿಲುಕಿದ್ದ ಹಡಗು ಹೆಲಿಕಾಪ್ಟರ್‌ನಲ್ಲಿದ್ದವರ ಕಣ್ಣಿಗೆ ಕಾಣಿಸಿಲ್ಲ. ಈಟಿವಿ ವಾಟರ್ ಲಿಲ್ಲಿ ಹಡಗು ಮತ್ತು ಐಸಿಜಿ ಹೆಲಿಕಾಪ್ಟರ್‌ಗೆ ಸಮುದ್ರದ ಮೇಲೆ ತೇಲುತ್ತಿದ್ದ ತೈಲ ಮತ್ತು ಹಡಗಿನ ಭಗ್ನಾವಶೇಷಗಳು ಕಾಣಿಸಿವೆ.

ಈ ಪ್ರದೇಶದಲ್ಲಿ ತೈಲ ಮಾಲಿನ್ಯ ತಡೆಗಟ್ಟಲು ಡಿಜಿ ಶಿಪ್ಪಿಂಗ್ ಎಂಎಸ್ ಕಾಯ್ದೆ 1958 ರ ಸೆಕ್ಷನ್ 356 ಜೆ ಅಡಿಯಲ್ಲಿ ಎಂ.ವಿ. ಕಾಂಚನ್ ಮಾಸ್ಟರ್ ಮತ್ತು ಮಾಲೀಕರಿಗೆ ನೋಟಿಸ್ ನೀಡಿದೆ ಎಂದು ಐಸಿಜಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.