ADVERTISEMENT

ಪಶ್ಚಿಮ ಬಂಗಾಳ: 13 ವರ್ಷದ ಬಳಿಕ ಟಾಟಾ ಸಮೂಹದೊಂದಿಗೆ ಸರ್ಕಾರದ ಚರ್ಚೆ

ಬಂಡವಾಳ ಹೂಡಿಕೆ

ಪಿಟಿಐ
Published 19 ಜುಲೈ 2021, 11:09 IST
Last Updated 19 ಜುಲೈ 2021, 11:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ: ‘ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡುವುದರ ಕುರಿತು ಟಾಟಾ ಸಮೂಹ ಜೊತೆಗೆ ಚರ್ಚೆ ನಡೆದಿದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ.

ರಾಜ್ಯದ ಸಿಂಗೂರ್‌ನಲ್ಲಿ ಟಾಟಾ ಸಮೂಹದ ಸಣ್ಣಗಾತ್ರದ ಕಾರುಗಳ ಉತ್ಪಾದನೆ ಘಟಕ ಸ್ಥಾಪನೆ ಕುರಿತಂತೆ ಭೂ ಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದ 13 ವರ್ಷದ ತರುವಾಯ ಟಾಟಾ ಜೊತೆಗೆ ಮಾತುಕತೆ ನಡೆಯುತ್ತಿದೆ.

ಉದ್ಯೋಗಾವಕಾಶ ಸೃಷ್ಟಿಯೇ ಟಿಎಂಸಿ ಸರ್ಕಾರದ ಮೊದಲ ಆದ್ಯತೆ ಎಂದು ಪ್ರತಿಪಾದಿಸಿರುವ ಸಚಿವ ಚಟರ್ಜಿ, ಉದ್ಯೋಗಾವಕಾಶಗಳ ಸೃಷ್ಟಿ ಸಾಮರ್ಥ್ಯ ಆಧರಿಸಿ ಕಂಪನಿಗಳಿಗೆ ಉತ್ತೇಜನ ನೀಡಲಾಗುತ್ತದೆ ಎಂದು ಹೇಳಿದರು.

ADVERTISEMENT

ಯಾವುದೇ ಪ್ರಮುಖ ಉದ್ಯಮ ಸಂಸ್ಥೆಗಳು ಆದಷ್ಟು ಶೀಘ್ರ ಎರಡು ದೊಡ್ಡ ಪ್ರಮಾಣದ ಉತ್ಪಾದನಾ ಘಟಕಗಳನ್ನು ರಾಜ್ಯದಲ್ಲಿ ಸ್ಥಾಪಿಸಬೇಕು ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಬಯಸುತ್ತದೆ ಎಂದು ತಿಳಿಸಿದರು.

‘ಟಾಟಾ ಸಮೂಹದ ಜೊತೆಗೆ ನಮಗೆ ಯಾವುದೇ ವೈರತ್ಯವಿಲ್ಲ. ಅವರ ಜೊತೆಗೆ ಜಗಳವೂ ಆಗಿಲ್ಲ. ಟಾಟಾ ಸಮೂಹ ದೇಶದ ಅತಿದೊಡ್ಡ ಗೌರವಾನ್ವಿತ ಉದ್ಯಮ ಸಂಸ್ಥೆಯಾಗಿದೆ. ಸಿಂಗೂರ್‌ನ ವೈಫಲ್ಯಕ್ಕಾಗಿ ನಾವು ಟಾಟಾ ಸಮೂಹವನ್ನು ದೂಷಿಸಲಾಗದು’ ಎಂದು ಅವರು ಪ್ರತಿಪಾದಿಸಿದರು.

‘ಸಮಸ್ಯೆ ಇದ್ದುದು ಆಗಿನ ಎಡಪಂಥದ ಸರ್ಕಾರ ಮತ್ತು ಒತ್ತಾಯದಿಂದ ಭೂಸ್ವಾಧೀನ ಪಡಿಸಿಕೊಳ್ಳುವ ಅದರ ನೀತಿಯಲ್ಲಿ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಟಾಟಾ ಸಮೂಹಕ್ಕೆ ಎಂದಿಗೂ ಮುಕ್ತ ಸ್ವಾತಂತ್ರ್ಯವಿದೆ’ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪಾರ್ಥ ಚಟರ್ಜಿ ಅವರು ಹೇಳಿದರು.

ಟಾಟಾ ಸಮೂಹವು ತನ್ನ ಕಚೇರಿಗಳಿಗಾಗಿ ಟಾಟಾ ಸೆಂಟರ್‌ ಅನ್ನು ರಾಜ್ಯದಲ್ಲಿ ಸ್ಥಾಪಿಸುವ ಆಸಕ್ತಿ ಹೊಂದಿದೆ. ಈಗಾಗಲೇ ಟಿಸಿಎಸ್‌, ಟಾಟಾ ಮೆಟಾಲಿಕ್‌ ಇವೆ. ಉಳಿದಂತೆ, ಇತರೆ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿಯನ್ನು ತೋರುವುದಾದರೆ ಸ್ವಾಗತ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.