ADVERTISEMENT

ಕುರ್ಲಾದಲ್ಲಿ ಕಟ್ಟಡ ಕುಸಿತ: 14 ಸಾವು, 13 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 13:50 IST
Last Updated 28 ಜೂನ್ 2022, 13:50 IST
ಮುಂಬೈನ ಕುರ್ಲಾ ಪ್ರದೇಶದಲ್ಲಿ ಕಟ್ಟಡ ಕುಸಿದುಬಿದ್ದ ಸ್ಥಳದಲ್ಲಿ ಮಂಗಳವಾರ ಎನ್‌ಡಿಆರ್‌ಎಫ್‌ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಯಿತು  –ಪಿಟಿಐ ಚಿತ್ರ
ಮುಂಬೈನ ಕುರ್ಲಾ ಪ್ರದೇಶದಲ್ಲಿ ಕಟ್ಟಡ ಕುಸಿದುಬಿದ್ದ ಸ್ಥಳದಲ್ಲಿ ಮಂಗಳವಾರ ಎನ್‌ಡಿಆರ್‌ಎಫ್‌ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಯಿತು  –ಪಿಟಿಐ ಚಿತ್ರ   

ಮುಂಬೈ (ಪಿಟಿಐ):ಕುರ್ಲಾ ಪ್ರದೇಶದ ನಾಲ್ಕು ಮಹಡಿಯ ಜನವಸತಿ ಕಟ್ಟಡ ಕುಸಿದ ಪರಿಣಾಮ 14 ಜನರು ಮೃತಪಟ್ಟು, 13 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಯ್ಕ್‌ ನಗರ ಸೊಸೈಟಿಯಲ್ಲಿರುವ ಕಟ್ಟಡದ ಒಂದು ಭಾಗ ಮಧ್ಯರಾತ್ರಿ ಕುಸಿದಿದೆ. ಇದಕ್ಕೆ ಹೊಂದಿಕೊಂಡಿರುವ ಮತ್ತೊಂದು ಕಟ್ಟಡ ಶಿಥಿಲಗೊಂಡಿರುವ ಕಾರಣ ಅಲ್ಲಿನ ನಿವಾಸಿಗಳನ್ನು ತೆರವು ಮಾಡಲಾಗಿದೆ.ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಬದುಕುಳಿದವರ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, 23 ಮಂದಿಯನ್ನು ರಕ್ಷಿಸಲಾಗಿದೆ. ಅವಶೇಷಗಳ ಅಡಿ ಸಿಲುಕಿಕೊಂಡಿದ್ದ ಮಹಿಳೆಯನ್ನು ಎನ್‌ಡಿಆರ್‌ಎಫ್ ತಂಡ ರಕ್ಷಿಸಿದೆ. ಘಟನಾ ಸ್ಥಳಕ್ಕೆ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆದಿತ್ಯಾ ಠಾಕ್ರೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಬಿಎಂಸಿ ಆಯುಕ್ತ ಇಕ್ಬಾಲ್‌ ಸಿಂಗ್ ಚಾಹಲ್‌, ’ಘಟನೆಯಲ್ಲಿ ಹದಿನಾಲ್ಕು ಮಂದಿ ಮೃತಪಟ್ಟಿದ್ದು, ನಾಲ್ವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. 9 ಮಂದಿ ಪ್ರಾಥಮಿಕ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಶಿಥಿಲಗೊಂಡಿರುವ ಕಟ್ಟಡದ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಜನರು ನಿರ್ಲಕ್ಷ್ಯ ವಹಿಸಿದರು. ಹಲವರು ಜೀವಂತವಿರುವ ಸಾಧ್ಯತೆ ಇರುವುದರಿಂದ ರಕ್ಷಣಾ ಕಾರ್ಯಾಚರಣೆಯನ್ನು ಎಚ್ಚರಿಕೆಯಿಂದ ನಡೆಸುವಂತೆ ಎನ್‌ಡಿಆರ್‌ಎಫ್‌ಗೆ ಮನವಿ ಮಾಡಲಾಗಿದೆ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.