ADVERTISEMENT

ಭಾರತಕ್ಕೆ ಹಿಂತಿರುಗಿದ 20 ಮಂದಿಗೆ ‘ಬ್ರಿಟನ್‌ ವೈರಸ್’

ಪಿಟಿಐ
Published 30 ಡಿಸೆಂಬರ್ 2020, 5:39 IST
Last Updated 30 ಡಿಸೆಂಬರ್ 2020, 5:39 IST
ಪ್ರಾತಿನಿಧಿಕ ಚಿತ್ರ (ರಾಯಿಟರ್ಸ್‌ ಚಿತ್ರ)
ಪ್ರಾತಿನಿಧಿಕ ಚಿತ್ರ (ರಾಯಿಟರ್ಸ್‌ ಚಿತ್ರ)   

ನವದೆಹಲಿ: ಬ್ರಿಟನ್‌ನಿಂದ ಭಾರತಕ್ಕೆ ಹಿಂತಿರುಗಿರುವ 14 ಮಂದಿಯಲ್ಲಿ ಮತ್ತೆ ಹೊಸ ರೂಪಾಂತರ ಕೊರೊನಾ ಇರುವುದು ದೃಢಪಟ್ಟಿದೆ. ಇದರಿಂದಾಗಿ ಇದುವರೆಗೆ ಒಟ್ಟು 20 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ (ಎನ್‌ಸಿಡಿಸಿ) ಕಳುಹಿಸಲಾಗಿದ್ದ ಮಾದರಿಗಳಲ್ಲಿ ಎಂಟು ಹಾಗೂ ಕೋಲ್ಕತ್ತ ಸಮೀಪದ ಕಲ್ಯಾಣಿಯಲ್ಲಿರುವ ರಾಷ್ಟ್ರೀಯ ಜೀವ ವೈದ್ಯಕೀಯ ಜೆನೊಮಿಕ್ಸ್‌ (ಎನ್‌ಐಬಿಎಂಜಿ) ಮತ್ತು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ (ಎನ್‌ಐವಿ) ತಲಾ ಒಂದು, ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್) ಏಳು ಹಾಗೂ ಹೈದರಾಬಾದ್‌ನ ಹೈದರಾಬಾದ್‌ನ ಸೆಲ್ಯುಲಾರ್ ಮತ್ತು ಮಾಲಿಕ್ಯೂಲರ್ ಬಯಾಲಜಿ (ಸಿಸಿಎಂಬಿ) ಕೇಂದ್ರದಲ್ಲಿ ಎರಡು, ದೆಹಲಿಯ ಜೆನೊಮಿಕ್ಸ್‌ ಮತ್ತು ಇಂಟೆಗ್ರೆಟಿವ್‌ ಜೀವವಿಜ್ಞಾನ ಕೇಂದ್ರದಲ್ಲಿ ಒಂದು ಮಾದರಿಯಲ್ಲಿ ರೂಪಾಂತರ ಕೊರೊನಾ ಇರುವುದು ದೃಢಪಟ್ಟಿದೆ.

ಮಂಗಳವಾರ ಆರು ಮಂದಿಯಲ್ಲಿ ರೂಪಾಂತರ ಕೊರೊನಾ ದೃಢಪಟ್ಟಿತ್ತು. ಈ ಆರು ಮಂದಿಯನ್ನು ಆಯಾ ರಾಜ್ಯ ಸರ್ಕಾರಗಳು ನಿಗದಿಪಡಿಸಿದ ಆರೋಗ್ಯ ಆರೈಕೆ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಇವರ ಸಂಪರ್ಕಕ್ಕೆ ಬಂದವರನ್ನು ಸಹ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ತಿಳಿಸಿದೆ.

ADVERTISEMENT

ರೂಪಾಂತರ ಕೊರೊನಾದಿಂದ ಸೃಷ್ಟಿಯಾಗಿರುವ ಪರಿಸ್ಥಿತಿಯನ್ನು ಜವಾಬ್ದಾರಿಯಿಂದ ನಿರ್ವಹಿಸಲಾಗುತ್ತಿದ್ದು, ಸೋಂಕಿತರ ಮೇಲೆ ನಿಗಾವಹಿಸಲಾಗಿದೆ. ಪರೀಕ್ಷೆಗಳನ್ನು ಕೈಗೊಳ್ಳಲು ಮತ್ತು ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸುವ ಕುರಿತು ರಾಜ್ಯ ಸರ್ಕಾರಗಳಿಗೂ ನಿರಂತರವಾಗಿ ಸಲಹೆಗಳನ್ನು ನೀಡಲಾಗುತ್ತಿದೆ.

ನವೆಂಬರ್‌ 25ರಿಂದ ಡಿಸೆಂಬರ್‌ 23ರ ಮಧ್ಯರಾತ್ರಿವರೆಗೆ ಬ್ರಿಟನ್‌ನಿಂದ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಸುಮಾರು 33 ಸಾವಿರ ಪ್ರಯಾಣಿಕರು ಬಂದಿಳಿದಿದ್ದಾರೆ. ಈ ಎಲ್ಲ ಪ್ರಯಾಣಿಕರನ್ನು ಪತ್ತೆ ಮಾಡಿ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದೆ.

ರೂಪಾಂತರ ಕೊರೊನಾ ಈಗಾಗಲೇ ಡೆನ್ಮಾರ್ಕ್‌, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್‌, ಫ್ರಾನ್ಸ್, ಸ್ಪೇನ್‌, ಸ್ವಿಟ್ಜರ್ಲೆಂಡ್‌, ಜರ್ಮನಿ, ಕೆನಡಾ, ಜಪಾನ್‌, ಲೆಬನಾನ್‌, ಸಿಂಗಪುರದಲ್ಲಿ ಕಾಣಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.