ADVERTISEMENT

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌: ಸಿಬ್ಬಂದಿ ಕಡಿತಕ್ಕೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 16:29 IST
Last Updated 14 ಮಾರ್ಚ್ 2024, 16:29 IST
   

ಮುಂಬೈ: ಒಂದೆಡೆ, ಹಲವು ಅಕ್ರಮಗಳನ್ನು ನಡೆಸಿದ್ದಕ್ಕಾಗಿ, ಆರ್‌ಬಿಐನ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಯ ಮೇಲೆ ನಿರ್ಬಂಧ ಹೇರಲಾಗಿದೆ. ಇನ್ನೊಂದೆಡೆ, ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ತನ್ನ ಕಾರ್ಯನಿರ್ವಾಹಣಾ ಸಿಬ್ಬಂದಿಯ ಉದ್ಯೋಗ ಕಡಿತಕ್ಕೆ ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ. ಆದರೆ, ಈ ಮಾಹಿತಿಯನ್ನು ಬ್ಯಾಂಕ್‌ ನಿರಾಕರಿಸಿದೆ.

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ ಶೇ 20ರಷ್ಟು ಕಾರ್ಯನಿರ್ವಹಣಾ ಸಿಬ್ಬಂದಿಯನ್ನು ಮನೆಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ. ಡಿಸೆಂಬರ್‌ 2023ರ ಮಾಹಿತಿ ಪ್ರಕಾರ, ಈ ಘಟಕದಲ್ಲಿ 2,775 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಬ್ಯಾಂಕ್‌ನ ಸಿಬ್ಬಂದಿಯ ಮೌಲ್ಯಮಾಪನ (ಅಪ್ರೈಸಲ್‌) ಪ್ರಕ್ರಿಯೆ ನಡೆಯುತ್ತಿದೆ. ಇದೇ ವೇಳೆಯಲ್ಲಿಯೇ ಆರ್‌ಬಿಐ ತನ್ನ ಆದೇಶವನ್ನೂ ನೀಡಿದೆ. ಅಪ್ರೈಸಲ್‌ನಲ್ಲಿ ಕಡಿಮೆ ಅಂಕಗಳಿದ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಾಗುತ್ತಿದೆ’ ಎಂದು ಉದ್ಯೋಗಿಯೊಬ್ಬರು ಹೇಳಿದರು.

ADVERTISEMENT

‘ಉದ್ಯೋಗಿಗಳು ನಿರಾಶೆಗೊಂಡಿದ್ದಾರೆ. ಯಾರನ್ನೂ ಕೆಲಸದಿಂದ ತೆಗೆಯುವುದಿಲ್ಲ ಎಂದು ಸಿಇಒ ವಿಯಜ್‌ ಶೇಖರ್‌ ಶರ್ಮಾ ಅವರು ಫೆಬ್ರುವರಿಯಲ್ಲಿ ಭರವಸೆ ನೀಡಿದ್ದರು. ಆದರೆ, ಅವರ ತಮ್ಮ ಮಾತನ್ನು ಉಳಿಸಿಕೊಳ್ಳುತ್ತಿಲ್ಲ’ ಎಂದು ಮತ್ತೊಬ್ಬ ಉದ್ಯೋಗಿ ಮಾಹಿತಿ ನೀಡಿದರು.

‘ಅಪ್ರೈಸಲ್‌ಗೂ ಉದ್ಯೋಗ ಕಡಿತಕ್ಕೂ ಅಂತರವಿದೆ’: ‘ಇಲ್ಲಿ ಯಾವುದೇ ಉದ್ಯೋಗ ಕಡಿತ ಪ್ರಕ್ರಿಯೆ ನಡೆಯುತ್ತಿಲ್ಲ. ಕಂಪೆನಿಯಲ್ಲಿ ವಾರ್ಷಿಕವಾಗಿ ನಡೆಯುವ ಅಪ್ರೈಸಲ್‌ ಪ್ರಕ್ರಿಯೆ ನಡೆಯುತ್ತಿದೆಯಷ್ಟೆ. ಅಪ್ರೈಸಲ್‌ಗೂ ಉದ್ಯೋಗ ಕಡಿತ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ’ ಎಂದು ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ವಕ್ತಾರರೊಬ್ಬರು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.