ನೋಯ್ಡಾ: ಉತ್ತರ ಪ್ರದೇಶದ ಗೌತಮ ಬುದ್ಧ ನಗರದಲ್ಲಿ ಹದಿನೈದು ಮಕ್ಕಳು ಸೇರಿದಂತೆ 44 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿರುವುದಾಗಿ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಬುಧವಾರ ಬೆಳಿಗ್ಗೆ 6ರಿಂದ ಗುರುವಾರದ ವರೆಗೂ 44 ಮಂದಿಯಲ್ಲಿ ಕೋವಿಡ್–19 ದೃಢಪಟ್ಟಿದೆ. ಅದರಲ್ಲಿ 15 ಮಕ್ಕಳೂ ಸೇರಿದ್ದು, ಒಟ್ಟು 68 ಮಾದರಿಗಳನ್ನು ದೆಹಲಿಯ ಜೀನೊಮಿಕ್ಸ್ ಇನ್‌ಸ್ಟಿಟ್ಯೂಟ್‌ಗೆ ಕಳುಹಿಸಲಾಗಿದೆ.
ವೈರಾಣು ವಂಶವಾಹಿ ಸಂರಚನೆ ವಿಶ್ಲೇಷಣೆಗಾಗಿ (ಜೀನೋಮ್ ಸೀಕ್ವೆನ್ಸಿಂಗ್) ಮಾದರಿಗಳನ್ನು ಕಳುಹಿಸಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಸುನಿಲ್ ಕುಮಾರ್ ಶರ್ಮಾ ಹೇಳಿದ್ದಾರೆ.
ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಎಲ್ಲ ಶಾಲೆಗಳು ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆ ಬುಧವಾರ ಮಾರ್ಗಸೂಚಿಯಲ್ಲಿ ತಿಳಿಸಿದೆ. ಮಗುವಿನಲ್ಲಿ ಕೆಮ್ಮು, ಶೀತ, ಜ್ವರ, ಭೇದಿ ಅಥವಾ ಕೋವಿಡ್–19ನ ಯಾವುದೇ ಲಕ್ಷಣಗಳು ಕಂಡು ಬಂದರೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
2020ರ ಮಾರ್ಚ್‌ನಿಂದ ಈವರೆಗೂ ಗೌತಮ ಬುದ್ಧ ನಗರದಲ್ಲಿ ಒಟ್ಟು 98,787 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಹಾಗೂ ಸೋಂಕಿನ ಕಾರಣಗಳಿಂದಾಗಿ 490 ಮಂದಿ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.