ಅತ್ಯಾಚಾರ
ಸಾಂದರ್ಭಿಕ ಚಿತ್ರ
ಮುಜಾಫರ್‌ನಗರ (ಉತ್ತರ ಪ್ರದೇಶ): ಇಲ್ಲಿನ ಸಿವಿಲ್ ಲೈನ್ ಪ್ರದೇಶದಲ್ಲಿ 16 ವರ್ಷದ ಬಾಲಕಿಯನ್ನು ಇಬ್ಬರು ಸೇರಿ ಅಪಹರಿಸಿ ಅತ್ಯಾಚಾರ ಎಸಗಿ, ಅದನ್ನು ವಿಡಿಯೊ ಚಿತ್ರೀಕರಣ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ ಹಾಗೂ ಪೋಕ್ಸೊ ಕಾಯ್ದೆಯಡಿ ರಿಜ್ವಾನ್ ಮತ್ತು ಅಬಾಜ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವೃತ್ತ ಪೊಲೀಸ್ ಅಧಿಕಾರಿ ರಾಜು ಕುಮಾರ್ ಸಾವ್ ತಿಳಿಸಿದ್ದಾರೆ.
ಏಪ್ರಿಲ್ 1 ರಂದು ಮೀರತ್ ರಸ್ತೆಯ ಕಂಪನಿ ಬಾಗ್ ಬಳಿ ಸಂತ್ರಸ್ತೆ ತನ್ನ ತಾಯಿಗಾಗಿ ಕಾಯುತ್ತಿದ್ದಾಗ, ಇಬ್ಬರು ಯುವಕರು ಕಾರಿನಲ್ಲಿ ಬಂದು ಅವಳನ್ನು ಬಲವಂತವಾಗಿ ಕಾರಿನೊಳಗೆ ಹತ್ತಿಸಿದ್ದಾರೆ. ಆಕೆಯನ್ನು ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಕೃತ್ಯದ ವಿಡಿಯೊ ಚಿತ್ರೀಕರಣ ನಡೆಸಿದ್ದಲ್ಲದೇ, ವಿಷಯವನ್ನು ಬಹಿರಂಗಪಡಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿಯ ಸಹೋದರ ದೂರಿನಲ್ಲಿ ಹೇಳಿದ್ದಾನೆ.
ಮನೆಗೆ ತಲುಪಿದ ಸಂತ್ರಸ್ತೆ, ಅನಾರೋಗ್ಯಕ್ಕೀಡಾಗುವವರೆಗೂ ಭಯದಿಂದ ಘಟನೆಯ ಬಗ್ಗೆ ಮೌನವಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ವೃತ್ತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.