ADVERTISEMENT

ಹರಿದ್ವಾರ| ವಲಸೆ ಕಾರ್ಮಿಕರನ್ನು ಕರೆತಂದ ರೈಲಿನಲ್ಲಿ 167 ಪ್ರಯಾಣಿಕರು ನಾಪತ್ತೆ

ಪಿಟಿಐ
Published 14 ಮೇ 2020, 13:59 IST
Last Updated 14 ಮೇ 2020, 13:59 IST
ರೈಲು (ಪ್ರಾತಿನಿಧಿಕ ಚಿತ್ರ- ಎಎಫ್‌ಪಿ)
ರೈಲು (ಪ್ರಾತಿನಿಧಿಕ ಚಿತ್ರ- ಎಎಫ್‌ಪಿ)   

ಹರಿದ್ವಾರ: ಗುಜರಾತ್‌ನ ಸೂರತ್‌ನಿಂದ ಹರಿದ್ವಾರ್‌ಗೆ ವಲಸೆ ಕಾರ್ಮಿಕರನ್ನು ಕರೆತರುತ್ತಿದ್ದವಿಶೇಷ ರೈಲಿನಲ್ಲಿ167 ಮಂದಿ ಪ್ರಯಾಣಿಕರು ನಾಪತ್ತೆಯಾಗಿದ್ದಾರೆ.

ಸೂರತ್‌ನಿಂದ ಹತ್ತಿದ ಪ್ರಯಾಣಿಕರ ಸಂಖ್ಯೆಯು ಹರಿದ್ವಾರದಲ್ಲಿ ಇಳಿದಿರುವ ಪ್ರಯಾಣಿಕರ ಸಂಖ್ಯೆಗೂ ತಾಳೆಯಾಗುತ್ತಿಲ್ಲ ಎಂದು ಹರಿದ್ವಾರ್ ಜಿಲ್ಲಾ ಮೆಜಿಸ್ಟ್ರೇಟ್ ಸಿ.ರವಿಶಂಕರ್ ಹೇಳಿದ್ದಾರೆ.

ಪಟ್ಟಿಯಲ್ಲಿರುವ ಪ್ರಯಾಣಿಕರ ಸಂಖ್ಯೆ ವ್ಯತ್ಯಾಸದ ಬಗ್ಗೆ ಪರೀಕ್ಷಿಸಲಾಗುವುದು. ಸೂರತ್‌ನಿಂದ ರೈಲು ಹತ್ತಿದ ನಂತರ ಈ ಪ್ರಯಾಣಿಕರು ನಾಪತ್ತೆಯಾಗಿದ್ದರೆ ಅದು ಗಂಭೀರ ವಿಷಯ. ಈ ಬಗ್ಗೆತನಿಖೆ ನಡೆಯುತ್ತಿದ್ದು, ಅದು ಮುಗಿದಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ADVERTISEMENT

ಸೂರತ್ ಆಡಳಿತ ಸಂಸ್ಥೆಯಿಂದ ಸಿಕ್ಕಿದ ಪಟ್ಟಿ ಪ್ರಕಾರ ಸೂರತ್‌ನಿಂದ ಮೇ.12ರಂದು ಹೊರಟ ವಿಶೇಷ ರೈಲಿನಲ್ಲಿ 1,340 ಮಂದಿ ಇದ್ದರು. ಇದೇ ರೈಲು ಹರಿದ್ವಾರಕ್ಕೆ ತಲುಪಿದಾಗ 1,173 ಮಂದಿ ಪ್ರಯಾಣಿಕರಷ್ಟೇ ಇಳಿದಿದ್ದಾರೆ.

ಈಗ ನಾಪತ್ತೆಯಾಗಿರುವ 167 ಮಂದಿ ಸೂರತ್‌ನಿಂದ ರೈಲು ಹತ್ತಿದ್ದಾರೆಯೇ ಅಥವಾ ರೈಲು ಹತ್ತಿದ ನಂತರ ಇಳಿದಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದ್ದು, ಸಂಬಂಧಪಟ್ಟ ಸಂಸ್ಥೆಗಳಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ರವಿಶಂಕರ್ ಹೇಳಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಉತ್ತರಾಖಂಡಕ್ಕೆ ಕರೆದುಕೊಂಡು ಬರಲು ಮೇ11 ರಿಂದ ವಿಶೇಷ ರೈಲು ಸಂಚರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.