ADVERTISEMENT

ಯೋಗಿ ಆದಿತ್ಯನಾಥ ಆಡಳಿತದಲ್ಲಿ 178 ಕ್ರಿಮಿನಲ್‌ಗಳ ಹತ್ಯೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 14:10 IST
Last Updated 8 ಮಾರ್ಚ್ 2023, 14:10 IST
   

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಅವರು 2017ರಲ್ಲಿ ಅಧಿಕಾರ ವಹಿಸಿಕೊಂಡ ದಿನದಿಂದ ಇಲ್ಲಿಯವರೆಗೆ, ‘ಕ್ರಿಮಿನಲ್‌’ಗಳು ಎನ್ನಲಾದ 178 ಮಂದಿಯನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.

‘ನಿಜವಾದ ಕ್ರಿಮಿನಲ್‌ಗಳನ್ನು ಬಂಧಿಸಲಾಗದ ತಮ್ಮ ವೈಫಲ್ಯವನ್ನು ‘ಮುಚ್ಚಿ’ಕೊಳ್ಳಲು ಪೊಲೀಸರು ಎನ್‌ಕೌಂಟರ್‌ ನಡೆಸುತ್ತಿದ್ದಾರೆ’ ಎಂದು ವಿರೋಧ ಪಕ್ಷಗಳು ಯೋಗಿ ಸರ್ಕಾರದ ಕುರಿತು ಪದೇ ಪದೇ ಆರೋಪ ಮಾಡುತ್ತಿರುವ ಸಂದರ್ಭದಲ್ಲಿ ಈ ಅಂಕಿಅಂಶ ಹೊರಬಿದ್ದಿದೆ.

‘2017ರಿಂದ ಇಲ್ಲಿಯವರೆಗೆ ‘ಕ್ರಿಮಿನಲ್‌’ಗಳು ಹಾಗೂ ಪೊಲೀಸರ ಮಧ್ಯೆ 10 ಸಾವಿರ ಬಾರಿ ಸಂಘರ್ಷ ನಡೆದಿದೆ. ಈ ವೇಳೆ 178 ‘ಕ್ರಿಮಿನಲ್‌’ಗಳನ್ನು ಹತ್ಯೆ ಮಾಡಲಾಗಿದೆ. 12 ಪೊಲೀಸರು ಹುತಾತ್ಮರಾಗಿದ್ದಾರೆ. ಐದು ಸಾವಿರ ‘ಕ್ರಿಮಿನಲ್‌’ಗಳಿಗೆ ಹಾಗೂ ಒಂದು ಸಾವಿರ ಪೊಲೀಸರಿಗೆ ಗಾಯಗಳಾಗಿವೆ. 20 ಸಾವಿರ ‘ಕ್ರಿಮಿನಲ್’ಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘2023ರ ಜನವರಿಯಿಂದ ಇಲ್ಲಿಯವರೆಗೆ 9 ‘ಕ್ರಿಮಿನಲ್‌’ಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ.

‘ಒಂದು ಸಮುದಾಯವನ್ನು ಗುರಿಯಾಗಿಸಿ ಎನ್‌ಕೌಂಟರ್‌ ನಡೆಸಲಾಗುತ್ತಿದೆ. ಮತ್ತೊಂದು ಸಮುದಾಯದ ಕುರಿತು ಕಣ್ಣುಮುಚ್ಚಿ ಕೂರಲಾಗಿದೆ ಎಂದು ವಿರೋಧ ಪಕ್ಷಗಳು ಬಿಜೆಪಿ ಸರ್ಕಾರವನ್ನು ಆರೋಪಿಸಿವೆ. ಆದರೆ, ಈ ಆರೋಪವನ್ನು ರಾಜ್ಯ ಪೊಲೀಸರು ಅಲ್ಲಗಳೆದಿದ್ದಾರೆ. ‘ಕ್ರಿಮಿನಲ್‌ಗಳ ಜಾತಿ ಅಥವಾ ಧರ್ಮವನ್ನು ನೋಡಿಕೊಂಡು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.