ADVERTISEMENT

ಟೈಟ್ಲರ್‌ ವಿರುದ್ಧ ವಿಚಾರಣೆ: 19ಕ್ಕೆ ನಿರ್ಧಾರ ಪ್ರಕಟಿಸಲಿರುವ ದೆಹಲಿ ಹೈಕೋರ್ಟ್

ಸಿಖ್‌ ವಿರೋಧಿ ದಂಗೆ

ಪಿಟಿಐ
Published 8 ಜುಲೈ 2023, 13:32 IST
Last Updated 8 ಜುಲೈ 2023, 13:32 IST
ಜಗದೀಶ್‌ ಟೈಟ್ಲರ್‌
ಜಗದೀಶ್‌ ಟೈಟ್ಲರ್‌   

ನವದೆಹಲಿ: 1984ರ ಸಿಖ್‌ ವಿರೋಧಿ ದಂಗೆ ಸಂದರ್ಭದಲ್ಲಿ ಇಲ್ಲಿನ ಪುಲ್ ಬಂಗಶ್‌ ಬಳಿ ನಡೆದಿದ್ದ ಹತ್ಯೆಗಳಿಗೆ ಸಂಬಂಧಿಸಿ ಕಾಂಗ್ರೆಸ್‌ ನಾಯಕ ಜಗದೀಶ್‌ ಟೈಟ್ಲರ್‌ ವಿರುದ್ಧ ಸಲ್ಲಿಕೆಯಾಗಿರುವ ದೋಷಾರೋಪ ಪಟ್ಟಿಗೆ ಅನುಗುಣವಾಗಿ ಕ್ರಮ ಕೈಗೊಳ್ಳುವ ಕುರಿತು ದೆಹಲಿ ಹೈಕೋರ್ಟ್‌ ಜುಲೈ 19ರಂದು ನಿರ್ಧಾರ ಪ್ರಕಟಿಸಲಿದೆ.

ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ (ಎಸಿಎಂಎಂ) ವಿಧಿ ಗುಪ್ತಾ ಆನಂದ್‌ ಅವರು ಜುಲೈ 7ರಂದು ಸಿಬಿಐ ಮತ್ತು ಆರೋಪಿ ಪರ ವಕೀಲರ ವಾದ ಪ್ರತಿವಾದವನ್ನು ಆಲಿಸಿ ತೀರ್ಪನ್ನು ಕಾಯ್ದಿರಿಸಿದ್ದರು.

ಸಿಬಿಐ ಕಳೆದ ಮೇ 20ರಂದು ಟೈಟ್ಲರ್‌ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ಮರು ದಿನ (1984ರ ನವೆಂಬರ್‌ 1) ನಡೆದಿದ್ದ ದಂಗೆಯಲ್ಲಿ ಮೂವರು ಸಾವಿಗೀಡಾಗಿದ್ದರು ಮತ್ತು ಗುರುದ್ವಾರಕ್ಕೆ ಬೆಂಕಿ ಹಚ್ಚಲಾಗಿತ್ತು. 

ADVERTISEMENT

‘ಟೈಟ್ಲರ್‌ ಅವರು ಪುಲ್‌ ಬಂಗಶ್‌ ಗುರುದ್ವಾರದ ಆಜಾದ್‌ ಮಾರುಕಟ್ಟೆ ಬಳಿ ಸೇರಿದ್ದ ಜನರನ್ನು ಪ್ರಚೋದಿಸಿದ್ದರು. ಗಲಭೆ ನಡೆಸುವಂತೆ ಅವರಿಗೆ ಕುಮ್ಮಕ್ಕು ನೀಡಿದ್ದರು. ಹೀಗಾಗಿಯೇ ದುಷ್ಕರ್ಮಿಗಳು ಗುರುದ್ವಾರಕ್ಕೆ ಬೆಂಕಿ ಹಚ್ಚಿದ್ದರು. ಸಿಖ್‌ ಸಮುದಾಯಕ್ಕೆ ಸೇರಿದ್ದ ಠಾಕೂರ್‌ ಸಿಂಗ್‌, ಬಾದಲ್‌ ಸಿಂಗ್‌ ಹಾಗೂ ಗುರುಚರಣ್‌ ಸಿಂಗ್‌ ಎಂಬುವರನ್ನು ಹತ್ಯೆ ಮಾಡಲಾಗಿತ್ತು’ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.