ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ವಿಧಿಸಲಾದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಕಾಂಗ್ರೆಸ್‌ನ ಮಾಜಿ ನಾಯಕ ಸಜ್ಜನ್ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ದೀಪಾವಳಿ ರಜೆಯ ನಂತರ ವಿಚಾರಣೆ ನಡೆಸುವುದಾಗಿ ಗುರುವಾರ ಸುಪ್ರೀಂಕೋರ್ಟ್ ತಿಳಿಸಿದೆ. ಅಕ್ಟೋಬರ್ 20ರಿಂದ 27ರವರಗೆ ಸುಪ್ರೀಂಕೋರ್ಟ್‌ಗೆ ರಜೆ ಇರಲಿದೆ.
ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯಿ ಅವರ ಪೀಠವು ವಿಚಾರಣೆ ನಡೆಸುತ್ತಿದ್ದು, ಪ್ರಕರಣದಲ್ಲಿ ಆರೋಪಗಳು, ಸಾಕ್ಷಿಗಳ ಹೇಳಿಕೆ ಹಾಗೂ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಈ ಪ್ರಕರಣದಲ್ಲಿ ಏನನ್ನು ಅವಲೋಕಿಸಿವೆ ಎಂಬ ವಿವರಗಳನ್ನು ಒದಗಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದೆ.
1984ರ ನವೆಂಬರ್ 1 ಮತ್ತು 2ರಂದು ನೈರುತ್ಯ ದೆಹಲಿಯಲ್ಲಿ ನಡೆದ ಐವರು ಸಿಖ್ಖರ ಹತ್ಯೆ ಮತ್ತು ಗುರುದ್ವಾರವನ್ನು ಸುಟ್ಟುಹಾಕಿದ ಪ್ರಕರಣ ಇದಾಗಿದೆ. ಅದೇ ವರ್ಷ ಅಕ್ಟೋಬರ್ 31ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಇಬ್ಬರು ಸಿಖ್ ಅಂಗರಕ್ಷಕರು ಹತ್ಯೆ ಮಾಡಿದ ನಂತರ ಸಿಖ್ ವಿರೋಧಿ ಗಲಭೆ ಬುಗಿಲೆದ್ದಿತ್ತು.
ಸಜ್ಜನ್ ಕುಮಾರ್ ಅವರ ಮೇಲ್ಮನವಿಯ ಜೊತೆಗೆ, ಪ್ರಕರಣದಲ್ಲಿ ಸಹ–ಅಪರಾಧಿಗಳಾದ ಬಲ್ವಾನ್ ಖೋಬರ್ ಮತ್ತು ಗಿರ್ಧಾರಿ ಲಾಲ್ ಅವರ ಅರ್ಜಿಗಳನ್ನು ಕೂಡಾ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.