ADVERTISEMENT

ವಿಪಕ್ಷಗಳು ಚರ್ಚಿಸದೇ ಸದನದಿಂದ ಓಡಿಹೋಗುತ್ತಿವೆ: ಸಚಿವ ಪ್ರಲ್ಹಾದ ಜೋಶಿ ಟೀಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 19:45 IST
Last Updated 15 ಡಿಸೆಂಬರ್ 2021, 19:45 IST
ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು  –ಪಿಟಿಐ ಚಿತ್ರ
ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು  –ಪಿಟಿಐ ಚಿತ್ರ   

ನವದೆಹಲಿ: ‘ಈಗ ನಡೆಯುತ್ತಿರುವ ಸಂಸತ್ತಿನ ಅಧಿವೇಶನವನ್ನು ಅರ್ಧಕ್ಕೇ ಮೊಟಕುಗೊಳಿಸುವ ಉದ್ದೇಶ ಇಲ್ಲ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಬುಧವಾರ ಹೇಳಿದರು.

ಲಖೀಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಎರಡೂ ಸದನಗಳಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ ಕಾರಣ, ಕಲಾಪವನ್ನು ದಿನದಮಟ್ಟಿಗೆ ಮುಂದೂಡಲಾಯಿತು. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ‘ವಿರೋಧ ಪಕ್ಷಗಳು ಸದನ ಬಿಟ್ಟು ಓಡಿಹೋಗುವ ಕೆಲಸ ಮಾಡಬಾರದು’ ಎಂದು ಸಂಸತ್ತಿನ ಹೊರಗೆ ಟೀಕಿಸಿದರು.

‘ಓಮೈಕ್ರಾನ್‌ ವೈರಾಣು, ಬೆಲೆ ಏರಿಕೆಯಂತಹ ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಆದರೆ ಈಗ ಚರ್ಚೆಯಲ್ಲಿ ಭಾಗಿಯಾಗದೇ ಓಡಿಹೋಗುತ್ತಿವೆ. ಬಹುಶಃ ಚರ್ಚೆ ಮಾಡಲು ವಿರೋಧ ಪಕ್ಷಗಳ ಬಳಿ ಏನೂ ಇಲ್ಲದಿರಬಹುದು’ ಎಂದು ಅವರು ಲೇವಡಿ ಮಾಡಿದ್ದಾರೆ.

ADVERTISEMENT

ಸದನದಲ್ಲಿ ನಡೆದದ್ದು...
* 2018ರಿಂದ 2020ರ ನಡುವೆ ವಿವಿಧ ರಾಜ್ಯಗಳಲ್ಲಿ ದೇಶದ್ರೋಹದ ಒಟ್ಟು 236 ಪ್ರಕರಣಗಳನ್ನು ದಾಖಲಿಸಲಾಗಿದೆ. 199 ಜನರನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಲಾಗಿದೆ. ಇವರಲ್ಲಿ ಏಳು ಜನರಿಗೆ ಶಿಕ್ಷೆಯಾಗಿದೆ ಎಂದು ಗೃಹ ಸಚಿವಾಲಯವು ರಾಜ್ಯಸಭೆಗೆ ಮಾಹಿತಿ ನೀಡಿದೆ

* 2020ರಲ್ಲಿ ದೇಶದ 10 ರಾಜ್ಯಗಳು ಮತ್ತು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿ ಒಂದೂ ಪ್ರಕರಣ ದಾಖಲಾಗಿಲ್ಲ. ದೇಶದಲ್ಲಿ 2019ರಲ್ಲಿ ಈ ಕಾಯ್ದೆಯ ಅಡಿ ಒಟ್ಟು 1,948 ಪ್ರಕರಣಗಳು ದಾಖಲಾಗಿದ್ದವು. 2020ರಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 1,321ಕ್ಕೆ ಇಳಿಕೆಯಾಗಿದೆ ಎಂದು ಗೃಹ ಸಚಿವಾಲಯವು ರಾಜ್ಯಸಭೆಗೆ ಮಾಹಿತಿ ನೀಡಿದೆ

* ಜಮ್ಮು–ಕಾಶ್ಮೀರದಲ್ಲಿ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ವಿವೇಚನೆಗೆ ಬಿಟ್ಟಿದ್ದು. ಆದರೆ ಜಮ್ಮು–ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿ ನೀಡುವುದನ್ನು ಸೂಕ್ತ ಸಮಯದಲ್ಲಿ ಪರಿಗಣಿಸಲಾಗುತ್ತದೆ ಎಂದು ಸರ್ಕಾರವು ಹೇಳಿದೆ

* ಸಂಸದರ ಅಮಾನತು ಬಿಕ್ಕಟ್ಟು ಪರಿಹಾರಕ್ಕೆ ಸಭೆ ಕರೆಯುವಂತೆ ರಾಜ್ಯಸಭೆಯ ಪ್ರತಿಪಕ್ಷ ಮುಖಂಡರು ಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ಮನವಿ ಮಾಡಿದರು. ಸೂಕ್ತ ಸಮಯದಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ಭರವಸೆ ನೀಡಿದರು

ಗೊಗೊಯಿ ವಿರುದ್ಧ ಹಕ್ಕುಚ್ಯುತಿ: ಇನ್ನೂ ಕೆಲ ಸದಸ್ಯರ ನೋಟಿಸ್
‘ನನಗೆ ಅನ್ನಿಸಿದಾಗ ರಾಜ್ಯಸಭೆಗೆ ಹೋಗುತ್ತೇನೆ’ ಎಂದು ಹೇಳಿಕೆ ನೀಡಿದ್ದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮತ್ತು ರಾಜ್ಯಸಭೆ ಸದಸ್ಯ ರಂಜನ್ ಗೊಗೊಯಿ ಅವರ ವಿರುದ್ಧ ಇನ್ನೂ ಕೆಲವು ಪಕ್ಷಗಳ ಸದಸ್ಯರು ಬುಧವಾರ ರಾಜ್ಯಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿವೆ.

ಗೊಗೊಯಿ ವಿರುದ್ಧ ಕಾಂಗ್ರೆಸ್‌ ಮತ್ತು ಟಿಎಂಸಿ ಸದಸ್ಯರು ಸೋಮವಾರ ರಾಜ್ಯಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿದ್ದವು. ಬುಧವಾರ ಶಿವಸೇನಾ, ಸಮಾಜವಾದಿ ಪಕ್ಷ, ಎನ್‌ಸಿಪಿ, ಸಿಪಿಐ, ಸಿಪಿಎಂ ಮತ್ತು ಮುಸ್ಲಿಂ ಲೀಗ್‌ ನೋಟಿಸ್ ನೀಡಿವೆ.

ಈ ಬಗ್ಗೆ ಪ್ರಶ್ನಿಸಿದಾಗ ಗೊಗೊಯಿ ಅವರು, ‘ನಾನು ಸೋಮವಾರ ರಾಜ್ಯಸಭೆಗೆ ಹೋಗಿದ್ದೆ. ಇವತ್ತು (ಬುಧವಾರ) ಹೋಗುತ್ತಿಲ್ಲ. ಗುರುವಾರ ಹೋಗುತ್ತೇನೆ. ಕ್ರಮ ತೆಗೆದುಕೊಳ್ಳಲು ಸಮಯವಾಗುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಅವರು ರಾಜ್ಯಸಭೆಗೆ ನಾಮನಿರ್ದೇಶಿತರಾದ ದಿನದಿಂದ ಈವರೆಗೆ ಏಳು ಬಾರಿ ಮಾತ್ರ ರಾಜ್ಯಸಭೆಗೆ ಹಾಜರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.