ADVERTISEMENT

2ಜಿ ಸ್ಪೆಕ್ಟ್ರಂ: ಜೆಪಿಸಿ ರಚನೆ ಬಗ್ಗೆ ಇಷ್ಟರಲ್ಲೇ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 10:10 IST
Last Updated 18 ಫೆಬ್ರುವರಿ 2011, 10:10 IST

ನವದೆಹಲಿ (ಐಎಎನ್ಎಸ್): 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸುವ ಬಗ್ಗೆ ಕೆಲವೇ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸೋಮವಾರ ಆರಂಭವಾಗಲಿರುವ ಮುಂಗಡಪತ್ರ ಅಧಿವೇಶನಕ್ಕೆ ಮುಂಚಿತವಾಗಿಯೇ ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ ಬನ್ಸಲ್ ಶುಕ್ರವಾರ ಇಲ್ಲಿ ಹೇಳಿದರು.

ಮುಂದಿನ ಮೂರು -ನಾಲ್ಕು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ವಿಷಯದ ಬಗ್ಗೆ ಸರ್ಕಾರ ವಿರೋಧ ಪಕ್ಷಗಳ ಜೊತೆಗೆ ಸಮಾಲೋಚಿಸುತ್ತಿದೆ ಎಂದು ಅವರು ಅಧಿವೇಶನಪೂರ್ವ ಪತ್ರಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

2ಜಿ ತರಂಗಾಂತರ ಹಗರಣ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂಬ ವಿರೋಧ ಪಕ್ಷಗಳ ಪಟ್ಟು ಮತ್ತು ಅದಕ್ಕೆ ಮಣಿಯಲು ಸರ್ಕಾರ ನಿರಾಕರಿಸುತ್ತಾ ಬಂದ ಪರಿಣಾಮವಾಗಿ ನವೆಂಬರ್ 9ರಿಂದ ಡಿಸೆಂಬರ್ 13ರ ವರೆಗೆ ನಡೆದಿದ್ದ ಸಂಸತ್ತಿನ ಚಳಿಗಾಲದ ಅಧಿವೇಶನದ ಕಲಾಪಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು.

ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು  ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡುವ ಭಾಷಣದೊಂದಿಗೆ ಸೋಮವಾರ ಸಂಸತ್ ಅಧಿವೇಶನ ಆರಂಭವಾಗಲಿದೆ.  ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆ ಮತ್ತು ರೈಲ್ವೇ ಮುಂಗಡಪತ್ರಗಳನ್ನು ಫೆಬ್ರುವರಿ 25ರಂದು ಮಂಡಿಸಲಾಗುವುದು. ಸಾಮಾನ್ಯ ಮುಂಗಡಪತ್ರ ಫೆಬ್ರುವರಿ 28 ರಂದು ಮಂಡನೆಯಾಗಲಿದೆ.

ಅಧಿವೇಶನವು ಎರಡು ಹಂತಗಳಲ್ಲಿ ಸಮಾವೇಶಗೊಳ್ಳಲಿದ್ದು ಮಾರ್ಚ್ 16ರಿಂದ ಏಪ್ರಿಲ್ 4ರವರೆಗಿನ ಬಿಡುವು ಇರುತ್ತದೆ. ಏಪ್ರಿಲ್ 21ರಂದು ಅಧಿವೇಶನ ಮುಕ್ತಾಯವಾಗುತ್ತದೆ.

ಅಧಿವೇಶನದಲ್ಲಿ 29 ಸಭೆ (ಸಿಟ್ಟಿಂಗ್ ) ನಡೆಯಲಿದ್ದು , ಪೂರ್ವಾರ್ಧದಲ್ಲಿ  17 ಮತ್ತು ಉತ್ತರಾರ್ಧದಲ್ಲಿ 12 ಸಭೆಗಳು ಇರುತ್ತವೆ. 66 ಮಸೂದೆಗಳು ಸೇರಿ ಒಟ್ಟು 75 ವಿಷಯಗಳು ಅಧಿವೇಶನದ ಅವಧಿಯಲ್ಲಿ ಮಂಡನೆಯಾಗಲಿವೆ ಎಂದು ಬನ್ಸಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT