ADVERTISEMENT

2ಜಿ ಹಗರಣದ ಪಾಲು ಕಲೈಜ್ಞರ್ ವಾಹಿನಿಗೆ ಇಲ್ಲ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 19:30 IST
Last Updated 11 ಫೆಬ್ರುವರಿ 2011, 19:30 IST


ಚೆನ್ನೈ (ಐಎಎನ್‌ಎಸ್): ಸಿನಿಯುಗ್ ಕಮ್ಯುನಿಕೇಷನ್ಸ್‌ನಿಂದ ತಾನು 200 ಕೋಟಿ ರೂಪಾಯಿ ಸಾಲ ಪಡೆದಿದ್ದಕ್ಕೂ 2 ಜಿ ತರಂಗಾಂತರ ಹಗರಣಕ್ಕೂ ಸಂಬಂಧವಿದೆ  ಎಂಬ ಆರೋಪಗಳನ್ನು ಕಲೈಜ್ಞರ್ ಟಿ.ವಿ. ಶುಕ್ರವಾರ ಅಲ್ಲಗಳೆದಿದೆ.ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್ ಶುಕ್ರವಾರ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದಾರೆ. 2009ರಲ್ಲಿ ಆದ ಸಾಲ ಒಪ್ಪಂದ ಹಾಗೂ 2007-08ರಲ್ಲಿ ನಡೆದ ತರಂಗಾಂತರ ಹಂಚಿಕೆಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಕಲೈಜ್ಞರ್ ಟಿ.ವಿ.ಯಲ್ಲಿ ಷೇರು ಒಡೆತನ ಹೊಂದುವ ಸಲುವಾಗಿ ಸಿನಿಯುಗ್ 2009ರಲ್ಲಿ ಹಣ ನೀಡಿತ್ತು. ಆದರೆ ಷೇರು ಮೌಲ್ಯದ ಬಗ್ಗೆ ಎರಡೂ ಸಂಸ್ಥೆಗಳ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ನಾವು ಅದನ್ನು ಸಾಲವೆಂದೇ ಪರಿಗಣಿಸಿದೆವು.  ಕಂಪೆನಿ ನೀಡಿದ್ದ 200 ಕೋಟಿ ರೂಪಾಯಿಯನ್ನು 31 ಕೋಟಿ ರೂಪಾಯಿ ಬಡ್ಡಿ ಸಹಿತ ಮರುಪಾವತಿ ಮಾಡಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.ವ್ಯವಹಾರದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಸಲ್ಲಿಸುವ ಜತೆಗೆ ಸೂಕ್ತ ಆದಾಯ ತೆರಿಗೆಯನ್ನೂ ಪಾವತಿಸಲಾಗಿದೆ. ಇಡೀ ವ್ಯವಹಾರ ಕಾನೂನು ಚೌಕಟ್ಟಿನಲ್ಲೇ ನಡೆದಿದೆ ಎಂದಿದ್ದಾರೆ.

ಕಲೈಜ್ಞರ್ ವಾಹಿನಿ ಒಡೆತನ ಹೊಂದಿದ ಕಂಪೆನಿಯಲ್ಲಿ ಕರುಣಾನಿಧಿ ಪತ್ನಿ ದಯಾಳು ಮತ್ತು ಪುತ್ರಿ ಕನಿಮೊಳಿ ಪ್ರಮುಖ ಪ್ರವರ್ತಕರಾಗಿದ್ದಾರೆ.ಈ ಮುನ್ನ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದ್ದ ಎಐಎಡಿಎಂಕೆ ಮುಖ್ಯಸ್ಥೆ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ, 2 ಜಿ ತರಂಗಾಂತರ ಹಗರಣ ಹಾಗೂ ಸಿನಿಯುಗ್ ಸಂಸ್ಥೆ ಕಲೈಜ್ಞರ್‌ಗೆ ನೀಡಿದ್ದ 200 ಕೋಟಿ ರೂಪಾಯಿಗಳ ಮಧ್ಯೆ ಸಂಬಂಧವಿದೆ ಎಂದು ಆಪಾದಿಸಿದ್ದರು.

ಮಾಜಿ ದೂರಸಂಪರ್ಕ ಸಚಿವ ರಾಜಾ 2 ಜಿ ತರಂಗಾಂತರವನ್ನು ಮುಂಬೈ ಮೂಲದ ಡೈನಾಮಿಕ್ಸ್ ಬಲ್ವಾ ರಿಯಲ್ ಎಸ್ಟೇಟ್ ಕಂಪೆನಿಗೆ ಸೇರಿದ ಸ್ವಾನ್ ಟೆಲಿಕಾಂಗೆ ಕೇವಲ 1537 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ನಂತರದ ಸ್ವಲ್ಪ ಅವಧಿಯಲ್ಲೇ ಡೈನಾಮಿಕ್ಸ್ ಬಲ್ವಾ ತಾನು ಪಡೆದ ತರಂಗಾಂತರದಲ್ಲಿ ಶೇ 45ರಷ್ಟನ್ನು ಯುಎಇ ಮೂಲದ ಎಟಿಸೆಲ್ಯಾಟ್ ಎಂಬ ಕಂಪೆನಿಗೆ 4200 ಕೋಟಿ ರೂಪಾಯಿಗೆ ಮಾರಾಟ ಮಾಡಿತ್ತು. ಈ ಹಂತದಲ್ಲಿ ತರಂಗಾಂತರ ಮಂಜೂರು ಮಾಡಿಸಿಕೊಳ್ಳಲು ಬಲ್ವಾ ಕಂಪೆನಿ ರಾಜಾ ಅವರ ರಾಜಕೀಯ ಗುರು ಕರುಣಾನಿಧಿ ಅವರಿಗೆ ಲಂಚ ನೀಡಿತ್ತು ಎಂದು ಜಯಲಲಿತಾ ಆಪಾದಿಸಿದ್ದರು.ಕರುಣಾನಿಧಿ ಮತ್ತು ಅವರ ಕುಟುಂಬದ ಸದಸ್ಯರನ್ನು ಸಹ ಆರೋಪಿಗಳೆಂದು ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT