ನವದೆಹಲಿ (ಐಎಎನ್‌ಎಸ್): ಉದ್ಯಮಿ ರತನ್ ಟಾಟಾ ಮತ್ತು ಕಾರ್ಪೊರೇಟ್ ಮಧ್ಯವರ್ತಿ ನೀರಾ ರಾಡಿಯಾ ಅವರನ್ನು ಆರೋಪಿಗಳೆಂದು ಹೆಸರಿಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಕೋರಿದ್ದ ಖಾಸಗಿ ಅರ್ಜಿದಾರ ಧರ್ಮೇಂದ್ರ ಪಾಂಡೆ ಅವರು ತಮ್ಮ ಆರೋಪಗಳನ್ನು ಸಾಬೀತುಪಡಿಸುವ ದಾಖಲೆ ಮಂಡಿಸಲು ನ್ಯಾಯಾಲಯ ಸೋಮವಾರ ಮೇ 7ರವರೆಗೆ ಕಾಲಾವಕಾಶ ನೀಡಿದೆ.
ದಾಖಲೆ ಸಲ್ಲಿಸಲು ಸಮಯ ನೀಡಬೇಕು ಎಂದು ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ನ್ಯಾಯಾಲಯವನ್ನು ಕೋರಿದ್ದರು. ಟಾಟಾ ಟೆಲಿ ಸರ್ವೀಸಸ್‌ಗೆ ಲೈಸೆನ್ಸ್ ಮಂಜೂರು ಮಾಡುವಲ್ಲಿ ನಿಯಮಾವಳಿ ಉಲ್ಲಂಘನೆ ಆಗಿದ್ದು ನೀರಾ ರಾಡಿಯಾ ಮತ್ತು ಟಾಟಾ ಅವರ ಪಾತ್ರವನ್ನು ಸಿಬಿಐ ಕಡೆಗಣಿಸಿದೆ ಎಂಬುದನ್ನು ಸಾಬೀತುಪಡಿಸಲು ನನ್ನ ಬಳಿ ಈಗ ಸಾಕ್ಷ್ಯ ಇಲ್ಲ ಮತ್ತು ದಾಖಲೆಗಳನ್ನು ಮಂಡಿಸಲು ಸಾಧ್ಯವಾಗಿಲ್ಲ. ಆದ್ದರಿಂದ ನ್ಯಾಯಾಲಯ ಸ್ವಲ್ಪ ಕಾಲಾವಕಾಶ ನೀಡಬೇಕು’ ಎಂದು ಪಾಂಡೆ ಪರ ವಕೀಲರು ಕೋರಿದರು.
‘ಗಂಭೀರ ಪ್ರಕರಣದ ಬಗ್ಗೆ ಹೇಳುತ್ತಿರುವ ನೀವು ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ನಿಮಗೆ ಕಾಲಾವಕಾಶ ಬೇಕು’ ಎಂದು ಸಿಬಿಐ ನ್ಯಾಯಾಧೀಶ ಒ.ಪಿ.ಸೈನಿ ಹೇಳಿದರು. ಅಲ್ಲದೆ ಮುಂದಿನ ವಿಚಾರಣೆಯನ್ನು ಮೇ 7ಕ್ಕೆ ನಿಗದಿಪಡಿಸಿದರು.
‘ರಾಡಿಯಾ, ಟಾಟಾ ವಿರುದ್ಧ ಸಾಕ್ಷ್ಯಗಳು ಇಲ್ಲ ಎಂದು ಸಿಬಿಐ ಹೇಳುತ್ತಿದೆ. ಆದರೆ ನೀವು ಸಾಕ್ಷ್ಯ ಇದೆ ಎನ್ನುತ್ತಿದ್ದೀರಾ. ನೀವು ಸಿಬಿಐನ್ನೇ ಯಾಕೆ ಮೊದಲು ಸಂಪರ್ಕಿಸಬಾರದಿತ್ತು?’ ಎಂದೂ ನ್ಯಾಯಾಲಯ ಕೇಳಿತು. ಉತ್ತರ ಪ್ರದೇಶದ ಸಾಹಿಬಾಬಾದ್‌ನ ನಿವಾಸಿ ಪಾಂಡೆ ಅವರು 2ಜಿ ತರಂಗಾಂತರ ಹಗರಣಕ್ಕೆ ಸಂಬಂಧಿಸಿದಂತೆ ಗುರುವಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.