ADVERTISEMENT

ಚೆನ್ನೈ: ಪೊಂಗಲ್‌ ಹಬ್ಬದ ಉಡುಗೊರೆ ವಿತರಣೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 14:25 IST
Last Updated 4 ಜನವರಿ 2022, 14:25 IST
ಚೆನ್ನೈನಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಹಿಳೆಯೊಬ್ಬರಿಗೆ ಪೊಂಗಲ್ ಹಬ್ಬದ ಉಡುಗೊರೆಯನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿದರು –ಪ್ರಜಾವಾಣಿ ಚಿತ್ರ
ಚೆನ್ನೈನಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಹಿಳೆಯೊಬ್ಬರಿಗೆ ಪೊಂಗಲ್ ಹಬ್ಬದ ಉಡುಗೊರೆಯನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿದರು –ಪ್ರಜಾವಾಣಿ ಚಿತ್ರ   

ಚೆನ್ನೈ: ತಮಿಳುನಾಡಿನ 2.15 ಕೋಟಿ ಕುಟುಂಬಗಳಿಗೆ ಪೊಂಗಲ್ ಹಬ್ಬದ ಅಂಗವಾಗಿ ಅಕ್ಕಿ, ತುಪ್ಪ ಮತ್ತು ಇತರ ದಿನಸಿ ವಸ್ತುಗಳನ್ನು ಒಳಗೊಂಡಿರುವ ಉಡುಗೊರೆಗಳನ್ನು ರಾಜ್ಯ ಸರ್ಕಾರ ನೀಡಲು ಮುಂದಾಗಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು 10 ಕುಟುಂಬಗಳಿಗೆ ಉಡುಗೊರೆ ನೀಡುವ ಮೂಲಕ ಮಂಗಳವಾರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸುಗ್ಗಿಯ ಹಬ್ಬವಾದ ಪೊಂಗಲ್ ಅನ್ನು ಜನವರಿ 14ರಂದು ಆಚರಿಸಲಾಗುವುದು. ಪಡಿತರ ಚೀಟಿ ಹೊಂದಿರುವ 2.15 ಕೋಟಿ ಕುಟುಂಬಗಳಿಗೆ ಸರ್ಕಾರಿ ಸ್ವಾಮ್ಯದ ಆವಿನ್ ಉತ್ಪಾದಿಸುವ 100 ಗ್ರಾಂ ತುಪ್ಪ ಸೇರಿದಂತೆ 21 ದಿನಸಿ ವಸ್ತುಗಳನ್ನು ಉಡುಗೊರೆಯಾಗಿ ನೀಡಲು ಸರ್ಕಾರ ನಿರ್ಧರಿಸಿದೆ.

ವಿವಿಧ ತಳಿಯ ಬೇಳೆಕಾಳುಗಳು ಮತ್ತು ಕಬ್ಬನ್ನು ಒಳಗೊಂಡಿರುವ ಉಡುಗೊರೆಗಳನ್ನು ಹಬ್ಬ ಪ್ರಾರಂಭವಾಗುವ ಮೊದಲೇ ಎಲ್ಲಾ ಅರ್ಹ ಕುಟುಂಬಗಳಿಗೆ ವಿತರಿಸಲಾಗುತ್ತದೆ. ಇದಕ್ಕಾಗಿ ಈಗಾಗಲೇ ಅರ್ಹ ಕುಟುಂಬಗಳಿಗೆ ಟೋಕನ್‌ ನೀಡಲಾಗಿದೆ.

ADVERTISEMENT

ಎಐಎಡಿಎಂಕೆ ಸರ್ಕಾರವು 2019 ಮತ್ತು 2021ರಲ್ಲಿ ಪೊಂಗಲ್‌ಗಾಗಿ ವಿತರಿಸಲಾದ ಉಡುಗೊರೆ ಜೊತೆಗೆ ನಗದು ನೆರವು ಸಹ ನೀಡಿತ್ತು. ಆದರೆ, ಡಿಎಂಕೆ ನೇತೃತ್ವದ ಸರ್ಕಾರವು ನಗದು ನೀಡುವುದನ್ನು ಕೈಬಿಟ್ಟಿದೆ.

‘ಪೊಂಗಲ್ ಹಬ್ಬದ ಉಡುಗೊರೆಗಳ ವಿತರಣೆಯನ್ನು ಪ್ರಾರಂಭಿಸಲು ಸಂತೋಷವಾಗಿದೆ. ತಮಿಳರು ಎಲ್ಲರೂ ಒಂದೇ ಜನಾಂಗದವರಾಗಿದ್ದು, ಪೊಂಗಲ್‌ ನಮ್ಮ ದೊಡ್ಡ ಹಬ್ಬವಾಗಿದೆ. ಸೂರ್ಯ ಮತ್ತು ಜಾನುವಾರುಗಳಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಸ್ಟಾಲಿನ್‌ ಟ್ವೀಟ್‌ ಮಾಡಿದ್ದಾರೆ.

ಮತ್ತೊಂದು ಸಮಾರಂಭದಲ್ಲಿ, ಮುಖ್ಯಮಂತ್ರಿ ಸ್ಟಾಲಿನ್‌ ಅವರು, ಹಿಂದೂ, ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಾಲಯಗಳ ಅರ್ಚಕರಿಗೆ ಹೊಸ ಬಟ್ಟೆಗಳನ್ನು ಮತ್ತು ದೇವಾಲಯಗಳಲ್ಲಿ ಕೆಲಸ ಮಾಡುವವರಿಗೆ ಸಮವಸ್ತ್ರವನ್ನು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.